ಕೇಂದ್ರ ಸಂಪುಟ ಮಹತ್ವದ ತೀರ್ಮಾನ: 5 ಪಿಂಚಣಿ ಯೋಜನೆ 5 ವರ್ಷ ವಿಸ್ತರಣೆ; ಇಂದಿರಾ ಹೆಸರು ಔಟ್, ಮರು ನಾಮಕರಣ

ಕೇಂದ್ರ ಸಂಪುಟ ಮಹತ್ವದ ತೀರ್ಮಾನ: 5 ಪಿಂಚಣಿ ಯೋಜನೆ 5 ವರ್ಷ ವಿಸ್ತರಣೆ; ಇಂದಿರಾ ಹೆಸರು ಔಟ್, ಮರು ನಾಮಕರಣ



ಹೊಸದಿಲ್ಲಿ: ದೇಶದ ಬಡವರು, ವೃದ್ಧರು, ವಿಧವೆಯರು ಹಾಗೂ ದಿವ್ಯಾಂಗರಿಗೆ ಆರ್ಥಿಕ ಭದ್ರತೆ ಒದಗಿಸುವ ಮಹತ್ವದ 'ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ'ವನ್ನು ಮುಂದಿನ 5 ವರ್ಷಗಳ ಅವಧಿಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಒಟ್ಟು 53,428 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಈ ಯೋಜನೆಯನ್ನು 2026-27 ರಿಂದ 2030-31ರವರೆಗೆ ಮುಂದುವರಿಸಲು ನಿರ್ಧರಿಸಲಾಗಿದ್ದು, ಈ ವೇಳೆ ಯೋಜನೆಗಳ ಹೆಸರುಗಳಿಂದ 'ಇಂದಿರಾ ಗಾಂಧಿ' ಹೆಸರನ್ನು ಕೈಬಿಟ್ಟು 'ಪ್ರಧಾನಮಂತ್ರಿ' ಎಂದು ಮರುನಾಮಕರಣ ಮಾಡಲಾಗಿದೆ. ಜತೆಗೆ ದಿವ್ಯಾಂಗರ ಪಿಂಚಣಿಯಲ್ಲೂ ಮಹತ್ವದ ಸಡಿಲಿಕೆ ಮತ್ತು ಏರಿಕೆ ಮಾಡಲಾಗಿದೆ.

ದಿವ್ಯಾಂಗರ ಪಿಂಚಣಿಯಲ್ಲಿ ಮಹತ್ವದ ಬದಲಾವಣೆಗಳು

'ವಿಕಲಚೇತನರ ಹಕ್ಕುಗಳ ಕಾಯ್ದೆ 2016'ರ ಅನ್ವಯ ದಿವ್ಯಾಂಗರ ಪಿಂಚಣಿ ಯೋಜನೆಯ ನಿಯಮಗಳನ್ನು ಹೆಚ್ಚು ಜನಸ್ನೇಹಿಯಾಗಿಸಲಾಗಿದೆ.

ಅಂಗವೈಕಲ್ಯದ ಮಿತಿ ಇಳಿಕೆ: ಈ ಹಿಂದೆ ಪಿಂಚಣಿ ಪಡೆಯಲು ಕನಿಷ್ಠ ಶೇ. 80ರಷ್ಟು ಅಂಗವೈಕಲ್ಯ ಇರಬೇಕೆಂಬ ನಿಯಮವಿತ್ತು. ಈಗ ಅದನ್ನು ಶೇ. 40ಕ್ಕೆ ಇಳಿಸಲಾಗಿದೆ. ಇದರಿಂದಾಗಿ ಲಕ್ಷಾಂತರ ಹೆಚ್ಚುವರಿ ವಿಕಲಚೇತನರು ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ.
ವಯೋಮಿತಿ ಇಲ್ಲ: ಕನಿಷ್ಠ ವಯೋಮಿತಿಯ ಮಾನದಂಡವನ್ನು ಸಡಿಲಿಸಲಾಗಿದ್ದು, ಹುಟ್ಟಿನಿಂದಲೇ (0 ವರ್ಷದಿಂದ) ಈ ಯೋಜನೆ ಅನ್ವಯವಾಗಲಿದೆ.
ಪಿಂಚಣಿ ಮೊತ್ತ ಏರಿಕೆ

0 ಇಂದ 79 ವರ್ಷದೊಳಗಿನ ದಿವ್ಯಾಂಗರಿಗೆ: 375 ರೂ.
80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ: 625 ರೂ. (ಕೇಂದ್ರದ ಪಾಲು) ಆರ್ಥಿಕ ನೆರವು ದೊರೆಯಲಿದೆ.
ವೃದ್ಧರು, ವಿಧವೆಯರ ಯೋಜನೆ ಯಥಾಸ್ಥಿತಿ

ವೃದ್ಧಾಪ್ಯ ಪಿಂಚಣಿ, ವಿಧವಾ ಪಿಂಚಣಿ ಹಾಗೂ ಕುಟುಂಬ ನೆರವು ಯೋಜನೆಗಳನ್ನು ಯಾವುದೇ ನಿಯಮಗಳ ಬದಲಾವಣೆಯಿಲ್ಲದೆ ಈಗಿರುವ ಸ್ವರೂಪದಲ್ಲೇ ಮುಂದುವರಿಸಲು ಸಂಪುಟ ಅನುಮೋದನೆ ನೀಡಿದೆ.
3.20 ಕೋಟಿ ಫಲಾನುಭವಿಗಳಿಗೆ ಅನುಕೂಲ

ಕೇಂದ್ರದ ಈ ನಿರ್ಧಾರದಿಂದಾಗಿ ದೇಶದ ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಸುಮಾರು 3.20 ಕೋಟಿ ಬಡ ಫಲಾನುಭವಿಗಳಿಗೆ ನೇರ ಅನುಕೂಲವಾಗಲಿದೆ. ಈ ಯೋಜನೆಗೆ ಶೇ. 100ರಷ್ಟು ಹಣಕಾಸಿನ ನೆರವನ್ನು ಕೇಂದ್ರ ಸರ್ಕಾರವೇ ಒದಗಿಸುತ್ತದೆ. ಪರಿಷ್ಕೃತ ನಿಯಮಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಮುಂದಿನ 3 ತಿಂಗಳೊಳಗೆ ಹೊರಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ತಿಳಿಸಿದೆ.

Comments