- Get link
- X
- Other Apps
ಪುಂಡೂರು ವೆಂಕಟರಾಜ ಪುಣಿoಚಿತ್ತಾಯರ ಹೆಸರಿನಲ್ಲಿ ಪ್ರತಿಷ್ಠಾನ; ಅಧ್ಯಕ್ಷರಾಗಿ ಕುಂಟಾರು ರವೀಶ ತಂತ್ರಿ ಆಯ್ಕೆ
ಕಾಸರಗೋಡು: ಹಿರಿಯ ವಿದ್ವಾಂಸ, ಬಹುಭಾಷಾ ಕೋವಿದ, ತುಳುಲಿಪಿ ಶೋಧಕ, ಕವಿ ದಿವಂಗತ ಪುಂಡೂರು ವೆಂಕಟರಾಜ ಪುಣಿoಚಿತ್ತಾಯರ ಹೆಸರಿನಲ್ಲಿ ‘ಪುವೆಂಪು ಪ್ರತಿಷ್ಠಾನ, ಕಾಸರಗೋಡು’ ಅಸ್ತಿತ್ವಕ್ಕೆ ಬಂದಿದೆ. ಪ್ರತಿಷ್ಠಾನದ ಅಧ್ಯಕ್ಷರಾಗಿ ಧಾರ್ಮಿಕ ಸಾಮಾಜಿಕ ಮುಂದಾಳು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಆಯ್ಕೆಯಾಗಿದ್ದಾರೆ
ಪುಣಿoಚಿತ್ತಾಯರ ಪುತ್ರ, ಕವಿ ವಿಜಯರಾಜ ಪುಣಿoಚಿತ್ತಾಯ ಅವರು ವ್ಯವಸ್ಥಾಪಕ ಟ್ರಸ್ಟಿ, ಪತ್ರಕರ್ತ ರವಿ ನಾಯ್ಕಾಪು ಅವರು ಸಂಯೋಜಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಟ್ರಸ್ಟಿಗಳಾಗಿ ಪ್ರೊ. ಎ. ಶ್ರೀನಾಥ್, ಅರಿಬೈಲು ಗೋಪಾಲ ಶೆಟ್ಟಿ, ರಾಘವ ಚೇರಾಲ್, ಮಂಜುನಾಥ ಆಳ್ವ ಮಡ್ವ, ನ್ಯಾಯವಾದಿ ಎಂ. ಎಸ್. ಥೋಮಸ್ ಡಿ ಸೋಜಾ, ಝೆಡ್. ಎ. ಕಯ್ಯಾರ್, ಅಖಿಲೇಶ್ ನಗುಮುಗಮ್, ಹುಸೈನ್ ಕುಬನೂರು ಅವರನ್ನು ಆಯ್ಕೆ ಮಾಡಲಾಗಿದೆ.
ಪುಂಡೂರು ವೆಂಕಟರಾಜ ಪುಣಿoಚಿತ್ತಾಯರು ಕಾಸರಗೋಡಿನ ಸಾಹಿತ್ಯ, ಸಂಸ್ಕೃತಿ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಛಾಪು ಮೂಡಿಸಿದ ವಿದ್ವಾಂಸರು. ಕನ್ನಡ, ಮಲಯಾಳ, ಸಂಸ್ಕೃತ, ತುಳು ಸೇರಿದಂತೆ ಹಲವು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ ಅವರು, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ತುಳುಲಿಪಿ ಶೋಧಕರಾಗಿರುವ ಅವರು ಭಾಷಾ ಸಂಶೋಧನೆ ಹಾಗೂ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು , ತಮ್ಮ ಬಹುಮುಖ ಪ್ರತಿಭೆಯಿಂದ ಜನಮನ್ನಣೆ ಗಳಿಸಿದ್ದರು.
ಅವರ ಸ್ಮರಣಾರ್ಥವಾಗಿ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದ್ದು, ಪುಣಿoಚಿತ್ತಾಯರ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಯುವಜನರಲ್ಲಿ ಸಾಹಿತ್ಯಾಭಿರುಚಿ ಬೆಳೆಸುವುದು ಹಾಗೂ ಗಡಿನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವುದು ಪ್ರತಿಷ್ಠಾನದ ಆಶಯವಾಗಿದ್ದು, ಪ್ರತಿಷ್ಠಾನವು ಅವರ ವಿದ್ವತ್ತು, ಸಾಹಿತ್ಯಸೇವೆ ಹಾಗೂ ಸಾಂಸ್ಕೃತಿಕ ಚಿಂತನೆಗಳನ್ನು ಶಾಶ್ವತಗೊಳಿಸುವುದರೊಂದಿಗೆ ಕಾಸರಗೋಡಿನ ಕನ್ನಡ ಸಾಹಿತ್ಯಿಕ ಚಟುವಟಿಕೆಗಳಿಗೆ ಹೊಸ ವೇದಿಕೆಯಾಗಲಿದೆ ಎಂದು ಪದಾಧಿಕಾರಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
- Get link
- X
- Other Apps
Comments
Post a Comment