ಗಮಕ ಶ್ರಾವಣ : ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರಿಂದ ಉದ್ಘಾಟನೆ

ಗಮಕ ಶ್ರಾವಣ : ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ   ಪಾದಂಗಳವರಿಂದ ಉದ್ಘಾಟನೆ
           ಎಡನೀರು:- "ಪ್ರಾಚೀನವಾದ ಗಮಕ ಕಲೆ ಭಾರತೀಯ ಸಂಸ್ಕೃತಿಯ ದ್ಯೋತಕವಾಗಿದೆ.ಶ್ರಾವಣ ಮಾಸದಲ್ಲಿ ಶ್ರೀಮದ್ರಾಮಾಯಣದ ವಾಚನ-ವ್ಯಾಖ್ಯಾನಗಳನ್ನು ಮಾಡುವುದರಿಂದ ಮಾನವರ ಜೀವನವು ಸಾರ್ಥಕವಾಗುವುದು" ಎಂಬುದಾಗಿ ನಿವೃತ್ತ ಪ್ರಾಂಶುಪಾಲ ಶ್ರೀ ರಾಜೇಂದ್ರ ಕಲ್ಲೂರಾಯ ಅವರು ಅಭಿಪ್ರಾಯ ಪಟ್ಟರು. 
           ಕರ್ನಾಟಕ ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕ ಮತ್ತು ಸಿರಿಗನ್ನಡ ವೇದಿಕೆಯ ಕೇರಳ ಗಡಿನಾಡ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಆದಿ ಗಮಕಿಗಳಾದ ಕುಶಲವರ ಜನ್ಮಮಾಸಾಚರಣೆಯ ಸರಣಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಶ್ರೀ ಮದೆಡನೀರು ಸಂಸ್ಥಾನದ ಚಾತುರ್ಮಾಸ ವೇದಿಕೆಯಲ್ಲಿ ಶ್ರೀ ಶ್ರೀ ಸ್ವಾಮೀಜಿಯವರ ಸಮಕ್ಷಮದಲ್ಲಿ ಮಾತನಾಡುತ್ತಿದ್ದರು. 
           ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ದೀಪ ಬೆಳಗುವುದರೊಂದಿಗೆ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನವಿತ್ತರು.ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಶ್ರೀ ತೆಕ್ಕೆಕೆರೆ ಶಂಕರನಾರಾಯಣ ಭಟ್ಟರು ಅಧ್ಯಕ್ಷತೆ ವಹಿಸಿದರು. 
         ಈ ಸಂದರ್ಭದಲ್ಲಿ ವಿದ್ವಾನ್ ನೆತ್ತರಗುಳಿ ತಿಮ್ಮಣ್ಣ ಭಟ್ಟರ ಹಳಗನ್ನಡದ ಶ್ರೀರಾಮ ಚರಿತ ಮಾನಸದ ಆಯ್ದಭಾಗವನ್ನು ನಾಯರ್ಪಳ್ಳ ಸಹೋದರಿಯರಾದ ಕುಮಾರಿ ಮೇಧಾ ಭಟ್ ಮತ್ತು ಕುಮಾರಿ ಶ್ರದ್ಧಾ ಭಟ್ ಸುಶ್ರಾವ್ಯವಾಗಿ ವಾಚನ ಹಾಗೂ ವ್ಯಾಖ್ಯಾನಗಳನ್ನು ಮಾಡಿದರು. 
         ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಮತ್ತು ಗಮಕ ಕಲಾ ಪರಿಷತ್ತಿನ ಕಾರ್ಯದರ್ಶಿ ಶ್ರೀ ವಿ.ಬಿ.ಕುಳಮರ್ವ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಖ್ಯಾತ ವ್ಯಂಗ್ಯಚಿತ್ರಕಾರ ಶ್ರೀ ವೆಂಕಟ ಭಟ್ ಎಡನೀರು ಧನ್ಯವಾದಗಳನ್ನು ಸಮರ್ಪಿಸಿದರು. 
               *~~~~~~~~~~~~~*

Comments