ಚಂದ್ರಗಿರಿಯ ಆಕಡೆಯಲ್ಲಿ : ಪೃಥ್ವಿರಾಜ್ ಶೆಟ್ಟಿ ಉಜಾರ್ ಪುತ್ತಿಗೆಹೊಸಮನೆ.

ಚಂದ್ರಗಿರಿಯ ಆಕಡೆಯಲ್ಲಿ : ಪೃಥ್ವಿರಾಜ್ ಶೆಟ್ಟಿ ಉಜಾರ್ ಪುತ್ತಿಗೆಹೊಸಮನೆ

ಇತ್ತೀಚೆಗೆ ಇಂದಿರಾ ಹೆಗ್ಡೆಯವರು ಬರೆದ ಬಂದಡ್ಕ ಗುತ್ತಿನ ಬಗ್ಗೆ ಇರುವ ವಾಟ್ಸಪ್ ಲೇಖನ ಒಂದು ಓದಿದ ಬಳಿಕ ಚಂದ್ರಗಿರಿಯ ಆ ಕಡೆಯೂ ತುಳುವ  ಸಮುದಾಯದವರು ವಾಸಿಸುತ್ತಿರುವ ಎಂಬ ಸುದ್ದಿ ತಿಳಿದು ಆಶ್ಚರ್ಯವೂ ಸಂತೋಷವೂ ಆಯಿತು, ಸಾಮಾನ್ಯವಾಗಿ ತುಳುನಾಡು  ಕಲ್ಯಾಣಪುರ ಹೊಳೆಯಿಂದ ಚಂದ್ರಗಿರಿ ಹೊಳೆಯವರೆಗೆ ಎಂಬುದು ನಮ್ಮ ಅನಿಸಿಕೆ, ಚಂದ್ರಗಿರಿಗೆ ಪಯಸ್ವಿನಿ ಎಂಬ ಹೆಸರು ಇದೆ, ಕೊಡಗಿನಲ್ಲಿ ಜನಿಸಿ ಸುಳ್ಯದಲ್ಲಿ ಹರಿದು ಕಾಸರಗೋಡು ಚಂದ್ರಗಿರಿ ಕೋಟೆಯ ಹತ್ತಿರ ಸಾಗರ ಸೇರುತ್ತಾಳೆ,

 ಹಿಂದೆ ಬಂಟರು  ಬಂದಡ್ಕ ಪ್ರದೇಶದಲ್ಲಿ ವಾಸಿಸುತ್ತಿರುವ ರೆಂಬ ಎಂಬುದು ತಿಳಿದಿದ್ದರೂ ಅಲ್ಲಿ ಬಂಟರ ಮನೆತನವೊಂದಿದೆ ಎಂದು ತಿಳಿದು ಸಂತೋಷವಾಗಿ ಅಲ್ಲಿಗೆ ಹೋಗಲು ನಾನು ಮತ್ತು ಕೊಡ್ಲಮೊಗೆರಿನ ಮನೋಜ್  ತೀರ್ಮಾನಿಸಿದೆವು, ವಿವೇಕ್ ಮತ್ತು ಮನೋಜರ ಚಿಕ್ಕಪ್ಪನ ಮಗ ಚೇತನ್ ನಮ್ಮ ಜೊತೆಯಾದರು. ಮಂಜೇಶ್ವರ ದವರಾದ ನಮಗೂ ಬಂದಡ್ಕದ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ,

ಕಾಸರಗೋಡಿನಿಂದ 40 ಕಿಲೋಮೀಟರ್ ನಷ್ಟು ದೂರವಿರುವ ಬಂದಡ್ಕ ಎಂಬ ಗ್ರಾಮವು ಹಿಂದೆ ಹೊಸದುರ್ಗ ಇಂದು ವೆಳ್ಳರಿಕುಂಡು ತಾಲೂಕಿನ  ಕುತ್ತಿಕೋಲ್ ಗ್ರಾಮ ಪಂಚಾಯಿತ
ಯು ಒಂದು  ಪ್ರದೇಶ, ಸುಳ್ಯದಿಂದ ಕೇವಲ ಹದಿನೈದು ಕಿಲೋಮೀಟರ್ ದೂರದಲ್ಲಿ ಇರುವ ಬಂದಡ್ಕವು ದಿನನಿತ್ಯದ ವ್ಯವಹಾರಗಳಿಗೆ ಹೆಚ್ಚಾಗಿ ಸುಳ್ಯವನ್ನು ಆಶ್ರಯಿಸಿದೆ ಹಲವಾರು ವರ್ಷಗಳ ಹಿಂದೆ ಎರಡು ದಾಯಾದಿ  ಕುಟುಂಬಗಳ ಜಗಳವು  ವಿಪರೀತಕ್ಕೆ ಏರಿದಾಗ ಹಲವಾರು ಕೊಲೆಗಳಲ್ಲಿ ಮಾರ್ಪಡುತ್ತಿದ್ದದ್ದು ಮುಂದೆ ಒಂದು ಕುಟುಂಬ ಕಮ್ಯುನಿಸ್ಟ್ ಪಕ್ಷದ ಜೊತೆ ಗುರುತಿಸಿಕೊಂಡರೆ ಮತ್ತೊಂದು ಕುಟುಂಬ ಪಕ್ಷ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಾಗ ಕೇರಳದಲ್ಲಿ ಸಾಮಾನ್ಯ ವೆಂಬಂತೆ ಅವುಗಳು ರಾಜಕೀಯ ಕೊಲೆಗಳಲ್ಲಿ ಮಾರ್ಪಟ್ಟು ಆ ಕುಟುಂಬಗಳ ವ್ಯಕ್ತಿಗಳು ಅಲ್ಲದೆ ಹಲವಾರು ಅನ್ಯ ವ್ಯಕ್ತಿಗಳು ಸಹ ಕೊಲೆ ಆದದನ್ನು, ರಾಜಕೀಯ ಗಲಭೆಗಳ ಸಮಯದಲ್ಲಿ ಕೃಷಿ ತೋಟಗಳಲ್ಲಿರುವ ತೆಂಗು ಕಂಗು ಬಾಳೆ ಗಿಡಗಳನ್ನು ಕಡಿದು ಹಾಕುವುದು ಮುಂತಾದವುಗಳನ್ನು 20 ವರ್ಷಗಳ ಹಿಂದೆ ಕಾಸರಗೋಡಿನ ಹಲವಾರು ಪತ್ರಿಕೆಗಳಲ್ಲಿ ಓದುತ್ತಿದ್ದೆ ಅಂದು ಈ ಬಂದಡ್ಕ ಎಂಬ ಪ್ರದೇಶದ ಹೇಗೆ ಇರಬಹುದು ಎಂದು ಬಹು ಸೋಜಿಗವಾಗುತಿತ್ತು, ಇಂದಿಗೂ ಸಹ ಕಾಸರಗೋಡು ಜಿಲ್ಲೆ, ಸುಳ್ಯ ತಾಲೂಕು ಮತ್ತು ಕೊಡಗಿನ ಭಾಗಮಂಡಲ  ಭಾಗದಲ್ಲಿ ಸಹ ಬಂದಡ್ಕ ಪರಿಸರದ ವ್ಯಕ್ತಿಗಳಿಗೆ ಅವರದೇ ಆದ ಒಂದು ಛಾಪು ಇದೆ .ಅಂತಹ ಪ್ರದೇಶದಲ್ಲಿ ಬಂಟರ ಹಲವಾರು ಮನೆಗಳು ಇವೆ ಎಂದು ಸ್ವಲ್ಪ ವರ್ಷಗಳ ಹಿಂದೆ ತಿಳಿದುಕೊಂಡಿದ್ದೆ ನಮ್ಮ ಕುಟುಂಬದ ಅಜ್ಜನ ಮಗಳೊಬ್ಬಳು ಅಲ್ಲಿಂದಲೇ ಮದುವೆ ಸಹ ಆಗಿರುವಂಥದ್ದು ಕುಟುಂಬದ ಅಷ್ಟಮಂಗಲ ಸಮಯದಲ್ಲಿ ಅರಿತು ಕೊಂಡಿದ್ದೆ.






ಶ್ರೀ ಕ್ಷೇತ್ರ ಕಾನತ್ತೂರುವವರೆಗೆ ಕೆಲವು ಬಾರಿ ಹೋಗಿದ್ದರು ಬಂದಡ್ಕ ಎಂಬ ಪ್ರದೇಶಕ್ಕೆ ಇಷ್ಟರವರೆಗೆ ಹೋಗಲು ಆಗಲೇ ಇರಲಿಲ್ಲ.
ಇಂದು ಚೆರ್ಕಳ ಬೋವಿಕ್ಕಾನ ಕಾನತ್ತೂರು ಕುತ್ತಿಕೋಲ್ ಮೂಲಕ ಬಂದಡ್ಕ ಪೇಟೆ ತಲುಪಿದ ಬಳಿಕ ಸುಬ್ರಹ್ಮಣ್ಯ ಕ್ಷೇತ್ರ ಮತ್ತು ಅದಕ್ಕೆ ಸಂಬಂಧಪಟ್ಟ ಭಂಡಾರ ಮನೆ ಬಂದಡ್ಕ ಗುತ್ತು ಬಗ್ಗೆ ಕೇಳುತ್ತಾ ಮಣೀಮೂಲೆ ಎಂಬಲ್ಲಿನ ಪೋಸ್ಟ್ ಆಫೀಸ್ನಲ್ಲಿ ವಿಚಾರಿಸಿದಾಗ ಅಲ್ಲಿನ ಊದ್ಯೋಗಿ  ನಿರ್ಗಳವಾಗಿ ಕನ್ನಡ ಮಾತಾಡಿ ನಾವು ತುಳು ಮಾತಾಡುದು ಕಂಡು ತುಳುವಲ್ಲಿ ಮುಂದುವರಿಸಿದರು, ನಾವು ದೇವಸ್ಥಾನ ಮತ್ತು ಗುತ್ತೀನ ಮನೆ ಸಂದರ್ಶಿಸಲು ಬಂದ ವಿಷಯವನ್ನು ಹೇಳಿದಾಗ ಆ ವ್ಯಕ್ತಿ ತಾನು ವೆಂಕಪ್ಪ ರೈ ಎಂದು ಆ ಮನೆತನಕ್ಕೆ ಸಂಬಂಧಪಟ್ಟವರೆಂದು ತಿಳಿದು ತುಂಬಾ ಸಂತೋಷವಾಯಿತು , ಮುಂದೆ ನೋಡಿದಾಗ ಬಂದಡ್ಕ ದಲ್ಲಿರುವ 40 ಬಂಟರ ಮನೆಗಳು ಸಹ ಬಂದಡ್ಕ ಭಂಡಾರದ ಮನೆಗೆ ಸಂಬಂಧಪಟ್ಟವರದ್ದೆ ಇರುವುದು, ಕುಟುಂಬಸ್ಥರು, ಹುಟ್ಟಿದ ಮಕ್ಕಳು, ಮೊಮ್ಮಕ್ಕಳು ನೆಂಟರಿಷ್ಟರು ಹೀಗೆ ಇಲ್ಲಿಯೇ ನೆಲೆಯಾಗಿದ್ದಾರೆ ಕೆಲವರು ಬೆಂಗಳೂರು ಮುಂಬೈ ಹೊರ ದೇಶಗಳಲ್ಲಿ ನೆಲೆಯಾಗಿದ್ದಾರೆ,ವೆಂಕಪ್ಪ ರೈ ಯವರು  ತಮ್ಮ ಬಂಧು ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ ರುಚಿರ್ ರೈ ಯವರಲ್ಲಿ ವಿಷಯ ತಿಳಿಸಲು ಅವರು ನಮ್ಮ ಜೊತೆಗೆ ಸೇರಿ ಈ ತರವಾಡಿಗೆ ಸೇರಿದ ಬಡಗಣ ಕರೆ ಎಂಬಲ್ಲಿಗೆ ಕರೆದುಕೊಂಡು ಹೋಗಿ ಅಲ್ಲಿ ದೈವಗಳ ಸಾನ್ನಿಧ್ಯವನ್ನು ತೋರಿಸಿದರು .ಸ್ವಲ್ಪ ಹೊತ್ತಿನಲ್ಲಿ ಅಲ್ಲಿಗೆ ರುಚಿರ್ ರೈ ಅವರ ತಂದೆಯವರಾದ ರವೀಂದ್ರನಾಥ ರೈ ಮತ್ತು ಬಂಧುವಾದ ಪ್ರೀತಮ್ ರೈ ಯವರು ಬಂದು ನಮ್ಮನ್ನು ಬಂದಡ್ಕ ಗುತ್ತು ಭಂಡಾರದ ಮನೆಗೆ ಕರೆದುಕೊಂಡುಹೋದರು, ಇವರ ಇಬ್ಬರ ತಂದೆಯವರು ಈ ಮನೆತನಕ್ಕೆ ಸೇರಿದವರಾಗಿದ್ದರು.
 ಚಂದ್ರಗಿರಿಯ ಆಕಡೆಯ ಗುತ್ತಿನ ಮನೆ
 ಬಂದಡ್ಕ ಪೇಟೆಯಿಂದ ಸುಮಾರು ಒಂದು ಕಿಲೋಮೀಟರ್ ನಷ್ಟು ದೂರದಲ್ಲಿ ಶ್ರೀ ಸುಬ್ರಾಯ ದೇವಸ್ಥಾನ ಇದ್ದು ಅದರ  ಬಗಲಲ್ಲಿ ಭಂಡಾರದ ಮನೆಯಿರುವುದು ಇಂದು ಮನೆಯಲ್ಲಿ ಹಿಂದಿನ ಯಜಮಾನರಾದ ಶ್ರೀ ನಾರಾಯಣ ಆಳ್ವರ ಸುಪುತ್ರರಾದ ನಿಶಾಂತ ಆಳ್ವ ತಮ್ಮ ಕುಟುಂಬ ಸಮೇತ ವಾಸಿಸುತ್ತಿರುವರು, ಈ ಭಾಗದಲ್ಲಿ ಇಲ್ಲಿ ಹಲವಾರು ವಿಶೇಷ ಮತ್ತು ಕಾರ್ಣಿಕವನ್ನು ಹೊಂದಿರುವಂತದ್ದು ಈ ಶ್ರೀ ಸುಬ್ರಾಯ ದೇವಸ್ಥಾನ ಮತ್ತು ಭಂಡಾರದ ಮನೆ, ಇಲ್ಲಿ ಎರಡು ಶಾಸ್ತವು, ಗಣಪತಿ ,ದುರ್ಗೆ, ಪಾರ್ವತಿ, ಕೃಷ್ಣನ ಮತ್ತು ನಾಗ ಉಪ ಪ್ರತಿಷ್ಠೆ ಗಳಿವೆ, ಹಿಂದೆ  ಬಲ್ಲಾಳರು ಆರಾಧಿಸುತ್ತಿದ್ದ ಮೂಲ ವಿಷ್ಣು ಪ್ರತಿಷ್ಠೆ ಇದ್ದು ಅದು ಟಿಪ್ಪುವಿನ ಆಕ್ರಮಣ ದಲ್ಲಿ ಭಗ್ನವಾದ ಬಳಿಕ ಅಡ್ಕ ಗೌಡಕುಟುಂಬಸ್ಥರ ಮನೆಯಿಂದ ವಿಷ್ಣುಮೂರ್ತಿ ಭಂಢಾರ ಬಂದು ಅದರ ನೇಮದ ಆರಾಧನೆ ಇದೆ,  ಐತಿಹ್ಯದ ಪ್ರಕಾರ ನಾಲ್ಕುನೂರು ವರ್ಷಗಳ  ಹಿಂದೆ ಕುಂಬಳೆ ಸೀಮೆಯ ಏತಡ್ಕ ದ ಹತ್ತಿರದ  ಚೆರ್ಕಾಬೆ  ಎಂಬ ಪರಿಸರದಿಂದ ಯಾವುದೋ ಕಷ್ಟಕಾಲದಲ್ಲಿ ಬಂದಾಗ ಬಂಟರ ನೆಲ್ಲಿಕುಂಜೆಗುತ್ತು ಯ ಒಂದು ಕವಲು ಕುಂಡಡ್ಕದಲ್ಲಿ ನೆಲೆಸಿದರೆ   ಅದೆ ಕುಟುಂಬದ ಇನ್ನೋಬ್ಬ ಬಂಟ ಸ್ತ್ರೀ ಮತ್ತು ಅವರ ಮಗಳು  ಒಬ್ಬ ಶಿವಳ್ಳಿ ಬ್ರಾಹ್ಮಣನ ಕೈಯಲ್ಲಿ ಸುಬ್ರಾಯ ದೇವರನ್ನು ಕೊಟ್ಟು ಜೊತೆಯಾಗಿ ದಕ್ಷಿಣಾಭಿಮುಖವಾಗಿ ಚಲಿಸಿದರು  ಚಂದ್ರಗಿರಿ ನದಿಯನ್ನು ದಾಟಿ ತುಂಬಾ ಮುಂದಕ್ಕೆ ಹೋದಾಗ ಬಂದಡ್ಕದ ಪ್ರಶಾಂತ ಪರಿಸರದಲ್ಲಿ  ನೆಲೆನಿಂತರು, ದೇವರನ್ನು ಪ್ರತಿಷ್ಠಾಪಿಸಿ ಓಕಲ್ಮೆ ಬಂಟ ಸ್ತ್ರೀಯು ತನ್ನ ಮಗಳನ್ನು ಆ ಬ್ರಾಹ್ಮಣನಿಗೆಯೇ ಕೊಟ್ಟು ಮದುವೆ ಮಾಡಿದಳು. ಅಳಿಯ ಕಟ್ಟಲೆ ಸಂಸ್ಕೃತಿಯ ಆ ಬಂಟ ಸ್ತ್ರೀಯ ಮಗಳಿಗೆ ಬ್ರಾಹ್ಮಣ ಪುರುಷನಿಂದ ಹುಟ್ಟಿದ ವಂಶಸ್ತರನ್ನೇ ಅರೈಯಾಲ್/ಅರೈವಾಲ್/ರೈ ಬಲ್ಲಾಳರೆಂದು ಕರೆಯುವುದು, ಕೆಲವು ವರ್ಷಗಳು ಈ ಅರೈಯಾಲ್ ಬಲ್ಲಾಳರು ಈ ಪ್ರದೇಶದಲ್ಲಿ ಆಳಿಕೊಂಡಿದ್ದರು ದೇವಸ್ಥಾನ ದ  ಆಡಳಿತವನ್ನು ಸುಸೂತ್ರವಾಗಿ ನಡೆಸಿಕೊಂಡು ಹೋದರು. ಮುಂದೆ ಅರೈಯಾಲ್(ರೈ) ಬಲ್ಲಾಳ ವಂಶದಲ್ಲಿ ಹೆಣ್ಣು ಸಂತಾನವಿಲ್ಲದೆ ಕೇವಲ ನಾಲ್ಕು ಗಂಡು ಮಕ್ಕಳ ಸಂತಾನದ ಭಾಗ್ಯ ದೊರೆಯಿತು, ಮುಂದೆ ಆ ನಾಲ್ಕು ಗಂಡು ಮಕ್ಕಳಿಗೆ ಮದುವೆಯ ವಯಸ್ಸಾದಾಗ ಸ್ವಜಾತಿಯ ಕುಟುಂಬಸ್ಥರು ಆ ಪರಿಸರದಲ್ಲಿ ಸಿಗದಾಗ ಸಮಾನ  ಸಮುದಾಯವಾದ ಮಲೆಯಾಳಿ ನಾಯರ್ ಗಳ ನಾಲ್ಕು ಮನೆತನಗಳ ಆದ ಕೋಡುತು, ಕರ್ರ್ಛೇರಿ, ಬೇತೂರು ಮತ್ತು ಚೆರ್ಕರೆ ಎಂಬ ನಾಲ್ಕು ತರವಾಡು ಮನೆಗಳಿಂದ ಹೆಣ್ಣುಮಕ್ಕಳನ್ನು ತಂದು ಮದುವೆ ಮಾಡಿಸಲಾಯಿತು, ಹಾಗೆ ಅಲ್ಲಿ ಸ್ಥಾಪಿತ ಶ್ರೀ ಸುಬ್ರಹ್ಮಣ್ಯ ಪ್ರತಿಷ್ಠೆ ಉಪದೇವತಾ ಅಲಯದ ಮತ್ತು ಹಿಂದೆ ಬಳ್ಳಾಲರು ಆಳುತ್ತಿದ್ದ ಭೂಮೀಯ ಇತರ ದೈವಗಳ   ಒಡೆತನದ ಹಕ್ಕು ಈ ಕುಟುಂಬಗಳ ಮಕ್ಕಳಿಗೂ ಸಿಕ್ಕಿತು, ಅಳಿಯಕಟ್ಟು ಸಂಪ್ರದಾಯದಂತೆ ಅಧಿಕಾರ ಹಸ್ತಾಂತರ ವಾಗುತ್ತಿದ್ದ ಅಲ್ಲಿ ಮುಂದೆ ಅಧಿಕಾರಕ್ಕಾಗಿ  ಆ ನಾಯರ್ ಸ್ತ್ರೀಯರಲ್ಲಿ ಜನಿಸಿದ ಮಕ್ಕಳ ನಾಲ್ಕು ಕುಟುಂಬಗಳ ನಡುವೆ ಜಗಳವಾಗಿ ವಿವಾದವು ಉಂಟಾದಾಗ, ಅದರಲ್ಲಿ ಒಂದು ಕುಟುಂಬದವರು ತಮ್ಮ ಅಧಿಪತ್ಯ ಸ್ಥಾಪಿಸಲು ಹವಣಿಸಿದರಂತೆ, ಹಾಗಾಗಿ  ದೇವಾಳದ ವಾರ್ಷಿಕ ಜಾತ್ರೆಯಂದು ದೇವರು ಹೊರುವ ಅಡಿಗಳು ದೇವರನ್ನು ಹೊತ್ತು ಬಲಿ ಹೊರಡಲು ದೇವ ಪ್ರೇರಣೆಯಿಂದ ವಿಮುಖರಾದರು ಈ ಸಂದಿಗ್ಧ ಸಮಯದಲ್ಲಿ ಬಂದಡ್ಕ ಗುತ್ತಿನ ಪೂರ್ವಜರ ಸಂತತಿ ಇನ್ನೋಂದು ವಿಭಾಗದವರು ಕುಂಡ್ಡಡ್ಕ ದಲ್ಲಿ ವಾಸಿಸುತ್ತಿದ್ದರು ಅಲ್ಲಿನ ಯಜಮಾನರಾದ ತ್ಯಾಂಪು ರೈ ಯಾನೆ ಸುಬ್ಬಪ್ಪ ರೈ ಯವರ ಮೈಮೇಲೆ ದೇವರು ಬಂದು ದರುಶನ ದಲ್ಲಿಯೇ ಕುಂಡಡ್ಕ ದಿಂದ ಬಂದಡ್ಕ ದೇವಸ್ಥಾನಕ್ಕೆ ವರೆಗೆ ಬಂದರಂತೆ, ಆ ಹೊತ್ತಿನಲ್ಲಿ ದೇವರ ಅಡಿಗಳು ಬಲಿಮೂರ್ತಿ ಹೊತ್ತು ದೇವರ ಜಾತ್ರೆ ನಡೆಯಿತಂತೆ, ಈ  ಘಟನೆಯ ನಂತರ ದೈವ ಸಂಕಲ್ಪ ದಂತೆ ವಿವಾದವೆಲ್ಲ ಅವರ ಸಮ್ಮುಖದಲ್ಲಿ ಬಗೆಹರಿದು    ಬಂದಡ್ಕ ಗುತ್ತು ಅದೇ ವಂಶದ ಮೂಲ ಕುಂಡ್ಡಡ್ಕದ ಬಂಟರಿಗೆ ಸೇರಿತಂತೆ, ಇದು 170 ವರ್ಷಗಳ ಹಿಂದೆ ನಡೆದ ನೈಜ್ಯ ಘಟನೆಯ ಈ ಬಗ್ಗೆ ಖ್ಯಾತ ಕವಿ ಕ್ಯಯಾರ ಕಿಂಞಣ್ಣರೈ ಅವರಲ್ಲಿ ಅವರ ಬಾಲ್ಯದಲ್ಲಿ ಅದನ್ನು ನೋಡಿದವರು ಹೇಳಿದ್ದರಂತೆ.
ಇದನ್ನು ಪುಷ್ಟೀಕರಿಸುವಂತೆ ಇಂದಿಗೂ ಆ ನಾಲ್ಕು ನಾಯರ್ ತರವಾಡು ಮನೆತನಗಳಿಗೆ ಶ್ರೀ ಸುಬ್ರಾಯ ದೇವರ ಸನ್ನಿಧಾನದಲ್ಲಿ ವಿಶೇಷ ಗೌರವಾದರಗಳಿವೆ.
 ಈ ಮನೆತನದ ಮೂಲ ಮನೆತನವು ಹಿಂದೆ ಹೇಳಿದ ಕುಂಡಡ್ಕ ತರವಾಡು ಇದು ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದ ಬದಿಯಡ್ಕದ ಸಮೀಪದಲ್ಲಿರುವಂತದ್ದು, ಇವರ ಬರಿ ಅತಿ ವಿಶೇಷವಾದ ಅಬ್ಬನ್ನಾಯ ಇತ್ತಿಚ್ಚಿಗೆ ಅದು ಉಜಿರನ್ನಾಯ ಬರಿಯೆಯೆಂದು ಹೇಳುತ್ತಾರೆ , ಈ ಕುಟುಂಬಸ್ಥರ ವೆಂಕಟರಮಣನ ಮುಡಿಪು ಸೇವೆಯು ಮತ್ತು ಗತಿಸಿಹೋದ ಹಿರಿಯರಿಗೆ ಬಡಿಸುವಂತ ಕ್ರಮವು ಕುಂಡಡ್ಕ ತರವಾಡಿ ನಲ್ಲಿ ನಡೆಯುತ್ತದೆ, ಕುಂಡಡ್ಕ ತರವಾಡಿನಲ್ಲಿ ಅವರ ಧರ್ಮ ದೈವ ಪೆಲಡ್ಕತಾಯ ಅಲ್ಲದೇ ಬಲ ಧೂಮಾವತಿ, ರಾಜನ್ ದೈವ ಧೂಮಾವತಿ ರಕ್ತೇಶ್ವರಿ ಕೊರತ್ತಿ ಗುಳಿಗನನ್ನು ಆರಾಧಿಸುತ್ತಾ ಬಂದಿರುತ್ತಾರೆ. ಬಂದಡ್ಕ ದಲ್ಲಿರುವ ಭಂಡಾರದ ಮನೆಯನ್ನು  1942 ರಲ್ಲಿ ಮನೆತನದ ಆಗಿನ ಯಜಮಾನ ರಾಗಿದ್ದ ಶ್ರೀ ಸುಬ್ಬಪ್ಪರೈ ಯವರು ಹೊಸದಾಗಿ ನಿರ್ಮಾಣ ಮಾಡಿದ್ದಾರೆ ಇಂದಿಗೂ ಈ ಮನೆಯು ತುಂಬಾ ಉತ್ತಮ ಸ್ಥಿತಿಯಲ್ಲಿ ಇರುವಂತದ್ದು. ಇಂದಿನ ಯಜಮಾನರು ಮತ್ತು ದೇವಾಲಯದ ಅನುವಂಶಿಕ ಮೊಕ್ತೇಸರರು ಬಿ ಸದಾನಂದ ರೈಗಳು‌
 1874ರಲ್ಲಿ ಅಳಿಯ ಸಂತಾನಿಗ ಆಕ್ಟ್ ಪ್ರಕಾರ ಈ ಕುಟುಂಬದ ಮತ್ತು ದೇವಾಲಯದ ಆಸ್ತಿ ಯ ಪಟ್ಟೆ ದಾಖಲಾತಿ ಕಾರಣ ಮಾಡಲಾಯಿತು.ಹಿಂದೆ ಈ ಮನೆತನದ ಕೆಳಗೆ ಸುತ್ತಮುತ್ತಲಿನ 4200 ಎಕರೆ ಜಮೀನು ಪ್ರದೇಶವಿದ್ದು ಬಿಟ್ರೀಷ್ ಕಾಲಘಟ್ಟದಲ್ಲಿ ಮತ್ತು ಭೂಸುಧಾರಣೆಯ ಕಾಲಘಟ್ಟದಲ್ಲಿ ಹಲವಾರು ಎಕರೆ ಜಮೀನು ಮೂಲ ಗೇಣಿದಾರರು ಒಕ್ಕಲು ಗೇಣಿದಾರರ ಪಾಲಾಗಿದೆ, 1970ರ ದಶಕದವರೆಗೂ ಈ ಕುಟುಂಬದ ಯಜಮಾನರೆ ಸುತ್ತಮುತ್ತ ಲಿನ ನಾಲ್ಕೂರಿನ ಪಟೇಲರಾಗಿರುತ್ತಿದ್ದರು, ಇಂದಿಗೂ ಈ ಮನೆತನದ ಹತ್ತಿರ ಐವತ್ತೆಕರೆ ಯಷ್ಟು ಜಮೀನು ಉಳಿದಿದೆ. ಶ್ರೀ ಸುಬ್ರಾಯ ದೇವಸ್ಥಾನದ ಮಾತ್ರವಲ್ಲದೆ ಬಂದಡ್ಕ ಬೇತಳ ಕಲ್ಕುಡ- ಕಲ್ಲುರ್ಟಿ ದೈವಸ್ಥಾನ,  ಇವರ ಮನೆತನಕ್ಕೆ ಸಂಬಂಧಿಸಿದ ಬಡಗಣ ಕರೆ ದೈವಗಳ ಚಾವಡಿ ಮುಂತಾದವುಗಳು ಕುಟುಂಬಕ್ಕೆ ಸೇರಿದ್ದಾಗಿದೆ, ಬಡಗಣ ಕರೆ ದೈವಗಳ ಸಾನಿಧ್ಯದಲ್ಲಿ 2019ರಲ್ಲಿ ನಿಲೇಶ್ವರ ಅರುವತ್ತು ತಂತ್ರಿಗಳ ನೇತೃತ್ವದಲ್ಲಿ  ನವೀಕರಣ  ಬ್ರಹ್ಮ ಕಲಶ ಮಾಡಲಾಗಿದೆ, ತೆಂಕಣ ಕರೆ  ಮನೆಯಲ್ಲಿ ಇಂದು ಯಾರೂ ವಾಸಿಸುವುದಿಲ್ಲ.
 ಬಡಗಣ ಕರೆ ದೈವಗಳ ಸಾನಿಧ್ಯದಲ್ಲಿ ಪೊಟ್ಟನ್ ಭೂತ, ಶ್ರೀವಿಷ್ಣುಮೂರ್ತಿ ,ರಕ್ತೇಶ್ವರಿ,
ಎರಿಂಞಪುಳಚಾಮುಂಡಿ , ಐವರ್ ದೈವಗಳು, ಗುಳಿಗಎಂಬ ಮಲಯಾಳ ತೈಯಗಳಿಗೂ  ಹಾಗೆ ಈ ಕವಲು ಮನೆತನಕ್ಕೆ ಸಂಬಂಧಿಸಿದ ಧರ್ಮದೈವವಾದ ಪಡ್ಡೈ ಧೂಮಾವತಿ ಎಂಬ ತುಳುವ ದೈವದ ಆರಾಧನೆ ನಡೆಯುತ್ತದೆ. ಪೊಟ್ಟ ಭೂತ ಮತ್ತು ಪಡೈ ಧೂಮಾವತಿ ಯ ಚಾವಡಿಯು ಪೂರ್ವಭಿಮುಖವಾಗಿ ಇದ್ದರೆ ಇತರ ದೈವಗಳ ಚಾವಡಿ ಪಶ್ಚಿಮಾಭಿಮುಖವಾಗಿ ಇದೆ.
 ಮಲಯಾಳಿ ದೈವಗಳು ಇವರನ್ನು ಪನ್ನಡ್ಕ ಪ್ಪಂಡೆ ಎಡವನ್ ಎಂದು ಇವರ ಯಜಮಾನನನ್ನು ಪನ್ನಡ್ಕ ಪ್ಪಂಡೆ ಕೋಯಿಮೆ ಎಂದು ಕರೆಯುತ್ತಾರೆ
ತುಳು ದೈವಗಳು ಇವರನ್ನು ತಲೆಮಣಿ ಕರ್ತುಲೆ ಎಂದು ಕರೆಯುತ್ತಾರೆ.ಇಲ್ಲಿನ ದೈವಗಳು ಇವರನ್ನು ಕರೆಯುವಾಗ ಪ್ರತಿ ಬಳ್ಳಾಲರು ಎಂದು ಸಹ ಉಲ್ಲೇಖಿಸುತ್ತದೆ, ಚಂದ್ರಗಿರಿ ಯ ಉತ್ತರದ ಕುಂಬಳೆ ಸೀಮೆಯಲ್ಲಿ ಮಲಯಾಳಿ ದೈವಗಳು ಬಂಟ ಸಮುದಾಯವನ್ನು ಜೊತೆಯಾಗಿ( ಎಡವನ್, ಎಡವಕ್ಕಾರರು ಕೆಲವು ಕುಟುಂಬಗಳು ಇವೆ) ಉಲ್ಲೇಖಿಸುವಾಗ ಮೂವಾಯೀರಂ ಅಂಗಭಡಿಗಳ್(ಮೂರುಸಾವಿರ ಬಂಟರು) ವಿಟ್ಲ ಸೀಮೆಯಲ್ಲಿ ಆಯಿರಂ ಅಂಗಭಡಿಗಳ್(ಸಾವಿರ ಬಂಟರು) ಎಂದು ಕರೆಯುವುದು ಆದರೆ ಇಲ್ಲಿ ಪ್ರತಿ ಬಲ್ಲಾಳರು ಎಂದು ಕರೆಯುವುದನ್ನು ನಾವು ಗಮನಿಸಬಹುದು.
 ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಜೊತೆ ಸಂಬಂಧ ಹೊಂದಿರುವ ಈ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸ ಅಲ್ಲದೆ ಸ್ಕಂದ ಷಷ್ಟಿ ಮಹೋತ್ಸವ ಜರುಗುತ್ತದೆ, ವಾರ್ಷಿಕ ಜಾತ್ರೋತ್ಸವವು ಮಕರ ಮಾಸದ ಭರಣಿ ನಕ್ಷತ್ರದಲ್ಲಿ ಆರಂಭವಾಗುತ್ತದೆ, ಈ ನಕ್ಷತ್ರದಂದು ಧ್ವಜಾರೋಹಣ ವಾಗುವ ಕೇರಳದ ಮತ್ತು ತುಳುನಾಡಿನ ಏಕೈಕ ದೇವಾಲಯ ಇದು ಎಂಬುದು ವಿಶೇಷ. ಆರಾಟದ ಸಮಯದಲ್ಲಿ ದೇವರ ಬಲಿಯು   ನರ್ಮಿಲ ಕಂಡ ಎಂಬಲ್ಲಿ ಬಂದಡ್ಕ ಕಲ್ಲುರ್ಟಿಯನ್ನು ಭೇಟೀ ಯಾಗಿ ಮುಂದೆ ಜೊತೆಯಾಗಿ ಆರಾಟವನ್ನು ಮುಗಿಸಿ ಮರಳುತ್ತದೆ.
ಮಾಯಿ ೧೨ ರಂದು ನಡೆಯುವ ನೇಮದಲ್ಲಿ ವಿಷ್ಣುಮೂರ್ತಿ ದೈವವು ಕಟ್ಟಿ ಕೋಲದಲ್ಲಿ ದೇವಸ್ಥಾನ ಕ್ಕೆ ಭೇಟಿ ನೀಡಿ ಪಕ್ಕದ ಬಂದಡ್ಕ ಗುತ್ತು ಭಂಡಾರದ ಮನೆಯಲ್ಲಿ ಹಾಲು ಕುಡಿಯುವ ಕ್ರಮವಿದೆ ಹಾಗೆ ಬಡಗಣ ಕರೆಯ ದೈವಗಳ ಸನ್ನೀದಾನಲ್ಲಿ ನೇಮದಲ್ಲಿ ನೇಮದಾರಿಯು ತೆಂಕಣ ಕರೆಯಲ್ಲಿರುವ ಈ ಕುಟುಂಬದ ಇನ್ನೊಂದು ಮನೆಯಲ್ಲಿ ಹಾಲು ಕುಡಿಯುದು ವಾಡಿಕೆ. ಹಿಂದೆ ಬಡಗಣ ಕರೆಯಲ್ಲಿ ನಾಲ್ಕು ಸುತ್ತಿನ ಮನೆ ಮತ್ತು ದೈವಗಳ ಸಾನಿದ್ಯವಿತ್ತು ಕಳೆದ ವರ್ಷ ಅದನ್ನು ನವಿಕರಿಸಿ ಹೊಸ ದೈವಗಳ ಸನ್ನಿಧಾನ ಕಟ್ಟಲಾಗಿದೆ. ತೆಂಕಣ ಕರೆಯಲ್ಲೀರುವ ಮನೆಯು ಜೀರ್ಣಾವಸ್ತೆಗೆ ಬಂದಿದೆ ಇಂದು ಅಲ್ಲಿ ಕುಟುಂಬಸ್ತರಾಗಲಿ ಬಂದುಗಳಾಗಲಿ ಯಾರು ವಾಸಿಸುವುದಿಲ್ಲ.
 ಶ್ರೀ ಸುಬ್ರಾಯ ದೇವಸ್ಥಾನದಲ್ಲಿ  ಗುತ್ತು ಕುಟುಂಬಸ್ತರ ಬಳಿಕ ಅರೆಭಾಷಿಗ ನಾಲ್ಕೂರಿನ ಗೌಡ ಸಮುದಾಯದ ಕುಟುಂಬಸ್ಥರಿಗೆ ಸ್ಥಾನವಿದೆ, ಹಿಂದೆ ದೇವಾಲಯದ ಕೆಲಸಕಾರ್ಯಗಳಲ್ಲಿ ಈ ಕುಟುಂಬಕ್ಕೆ ಸೇರಿದ ವ್ಯಕ್ತಿಗಳು ಸೇವೆ ಮಾಡಿರುವುದು ಐತಿಹ್ಯ, ಗುತ್ತು ಕುಟುಂಬಸ್ಥರಿಗೆ ಜಾತ್ರೆ ಮತ್ತು ಇತರ ಉತ್ಸವಗಳ ಸಮಯದಲ್ಲಿ ಅಮೆ ಸೂತಕ ಬಂದರೆ ನಾಲ್ಕೂರಿನ ಗೌಡರಲ್ಲಿ ಪ್ರಮುಖ ಅಡ್ಕ ಕುಟುಂಬಸ್ಥರು ಎಲ್ಲಾ ಜವಾಬ್ದಾರಿಗಳನ್ನು ವಹಿಸುತ್ತಾರೆ, ವಾರ್ಷಿಕ ಜಾತ್ರೋತ್ಸವ ಸಮಯ ದೇವಾಲಯದಲ್ಲಿ ರುವ ಗುಹಾ ಪ್ರವೇಶಕ್ಕೆ ಮೊದಲಿಗೆ ಬಂದಡ್ಕ ಗುತ್ತು ಕುಟುಂಬಸ್ಥರಿಗೆ ಪ್ರವೇಶ ಆಮೇಲೆ ಅಡ್ಕ ಕುಟುಂಬಸ್ಥರು ಪ್ರವೇಶಿಸಿ ಬಳಿಕ ಇತರರು ಪ್ರವೇಶಿಸುವುದು ವಾಡಿಕೆ. ಮದ್ರಾಸ್ ರಾಜ್ಯವಾಗಿದ್ದಾಗ ಹೈಕೋರ್ಟಲ್ಲಿ ಈ ಸುಬ್ರಹ್ಮಣ್ಯ ದೇವಸ್ಥಾನ ಬಂದಡ್ಕ ಗುತ್ತು ಕುಟುಂಬದ ಖಾಸಗಿ ದೇವಸ್ಥಾನ ಎಂದು ಇವರ ಪರವಾಗಿ ತೀರ್ಪು ನೀಡಿತ್ತು. ಹೀಗಾಗಿ ದೇವಸ್ಥಾನದ ಹಕ್ಕುಗಳು ಈ ಕುಟುಂಬಕ್ಕೆ ಉಳಿಯಿತು.
 ಇದೇ ದಿನಗಳಲ್ಲಿ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ದೇವಸ್ಥಾನವನ್ನು ಮುಜರಾಯಿ ಇಲಾಖೆ ವಶಪಡಿಸಿಕೊಳ್ಳುವ ಪ್ರಕ್ರಿಯೆ ಮುಂದುವರಿಸಿತ್ತು. ಆಗಿನ ಧರ್ಮಸ್ಥಳದ ಧರ್ಮಾಧಿಕಾರಿಯವರು ಅಂದಿನ ಯಜಮಾನರಾದ ನಾರಾಯಣ ಆಳ್ವರಿಗೆ ಪತ್ರ ಬರೆದು “ಸುಬ್ರಹ್ಮಣ್ಯ ದೇವಸ್ಥಾನ ಬಂದಡ್ಕ ಕುಟುಂಬದ ದೇವಸ್ಥಾನ” ಎಂಬ ಮದ್ರಾಸ್ ಉಚ್ಚನ್ಯಾಯಾಲಯದ ತೀರ್ಪಿನ ಪ್ರತಿ ಕೇಳಿ ಮತ್ತು ವಿವರ ಕೇಳಿ ಪತ್ರ ಬರೆದಿದ್ದರು. ಆ ಪತ್ರ ಇವರ ಸಂಗ್ರಹದಲ್ಲಿ ಇದೆ.ಇಂದು ಸುಲಭ ಆಡಳಿತಕ್ಕಾಗಿ ಊರಿನ ಸಮಿತಿ ಸಹ ರಚನೆ ಮಾಡಲಾಗಿದೆ.
( ಇಷ್ಟು ವಿಷಯಗಳು ನಿಶಾಂತ್ ಆಳ್ವ , ವೆಂಕಪ್ಪ ರೈ,ಪ್ರೀತಮ್ ರೈ ಮತ್ತು ರವೀಂದ್ರನಾಥ ರೈ ಮತ್ತು ಫೋನಿನ ಮೂಲಕ ಕುಂಡ್ಡಡ್ಕದಲ್ಲಿರುವ ಕುಟುಂಬಸ್ಥ ಚಿತ್ತರಂಜನ ಆಳ್ವರಲ್ಲಿ, ಕೇಳಿ ತಿಳಿದು ಕೊಂಡಿದ್ದು ಹಿಂದಿನ ಯಜಮಾನರಾದ ಶ್ರೀ ನಾರಾಯಣ ಆಳ್ವರು ಎಲ್ಲಾ ಕುಲಂಕುಷವಾಗಿ ದಾಖಲೆ ಸಹಿತ ಬರೆದಿಟ್ಟಿರುವರು ಅದು ಸಮಯದ ಅಭಾವದಿಂದ ಎಲ್ಲವನ್ನೂ ನೋಡಲಾಗಲಿಲ್ಲ, ಮುಂದಿನ ದಿನಗಳಲ್ಲಿ ಅದರ ಮೂಲಕವೂ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುವುದು)

ಪೃಥ್ವಿರಾಜ್ ಶೆಟ್ಟಿ ಉಜಾರ್ ಪುತ್ತಿಗೆಹೊಸಮನೆ.

Comments