ಕಾಸರಗೋಡಿಗೆ 37ರ ಹರೆಯ:ಸಾಧಿಸಿದ್ದೇನು? ಎಂ. ನಾ. ಚಂಬಲ್ತಿಮಾರ್

ಕಾಸರಗೋಡಿಗೆ 37ರ ಹರೆಯ:ಸಾಧಿಸಿದ್ದೇನು?
-------------------------------------
ಕಾಸರಗೋಡು ಜಿಲ್ಲೆಗಿಂದು 37ನೇ ಜನುಮದಿನ. 
1984ರ ಮೇ 24 ರಂದು ಅವಿಭಜಿತ ಕಣ್ಣೂರು ಜಿಲ್ಲೆಯ ಭಾಗವಾಗಿದ್ದ ಕಾಸರಗೋಡನ್ನು ಅಂದಿನ ಮುಖ್ಯಮಂತ್ರಿ ಕೆ. ಕರುಣಾಕರನ್ ಸ್ವತಂತ್ರ ಜಿಲ್ಲೆಯಾಗಿ ಘೋಷಿಸಿದರು. 
ಕಾಸರಗೋಡು ಸ್ವತಂತ್ರ ಜಿಲ್ಲೆಯಾಗಬೇಕೆಂದು ಒತ್ತಾಯಿಸಿ 80ರ ದಶಕದಲ್ಲಿ ಕಾಸರಗೋಡಿನಲ್ಲಿ ಅನೇಕಾನೇಕ ಹೋರಾಟ, ಸತ್ಯಾಗ್ರಹಗಳು ನಡೆದಿತ್ತು. ತಿರುವನಂತಪುರ ಸೆಕ್ರೇಟರಿಯೇಟ್(ವಿಧಾನಸಭೆ)ಮುಂಭಾಗದಲ್ಲಿ 1980ರಲ್ಲಿ ನಡೆದ ಸತ್ಯಾಗ್ರಹ ದ ಚಿತ್ರ ಈ ಬರಹದ ಜತೆಗಿದೆ.. 
ಜಿಲ್ಲೆ ರೂಪುಗೊಂಡು 37ವರ್ಷಗಳಾದರೂ ಕಾಸರಗೋಡು ಅತ್ಯುತ್ತರ ಕೇರಳದ ಗಡಿಯ ಜಿಲ್ಲೆಯಾಗಿ ತನ್ನ ತವರು ಕರ್ನಾಟಕವನ್ನವಲಂಬಿಸಿಯೇ ಇದೆ ಅಲ್ಲದೇ ಸ್ವತಂತ್ರ ಅಭ್ಯುದಯ ಕಾಣಲಿಲ್ಲ! 
ಭಾಷಾವಾರು ಪ್ರಾಂತ್ಯ ವಿಂಗಡಣೆ ವೇಳೆಯ ರಾಜಕೀಯ ಸ್ವಾಧೀನ, ಕುಟಿಲತೆಯಿಂದ ಕಾಸರಗೋಡು ಭೂಭಾಗ ಕೇರಳದ ಪಾಲಾಯಿತು. ಇದನ್ನು ಪ್ರತಿಭಟಿಸಿ, ಕನ್ನಡದ ಮೇಲಣ ಅನ್ಯಾಯ ಖಂಡಿಸಿ ಕಾಸರಗೋಡಿನಲ್ಲಿ ಕನ್ನಡದ ಹೋರಾಟ ಆರಂಭದಲ್ಲಿ ಪ್ರಬಲವಾಗಿತ್ತು. ಕನ್ನಡದ ಹೆಸರಲ್ಲಿ ಶಾಸಕರ ಆಯ್ಕೆಯೂ ಆಗಿತ್ತು. ಆದರೆ ಅನಂತರ ವರ್ಷಗಳುರುಳಿದಂತೆ ಕನ್ನಡಿಗರ ಶಕ್ತಿ ಕ್ಷೀಣಿಸಿತು. ಹೋರಾಟ ಸ್ವಾರ್ಥ ಪ್ರೇರಿತವಾಗಿ, ಉದ್ದೇಶ ಸಂಕುಚಿತಗೊಂಡಿತು. ಪ್ರಬಲ ನಾಯಕತ್ವದ ಕೊರತೆ ಗಂಭೀರವಾಗಿ ಕಾಡಿತು. ಆದರೂ ಇಂದಿಗೂ ಕನ್ನಡಿಗರು ಈ ನೆಲದಲ್ಲಿ ನಿರ್ಣಾಯಕ ಶಕ್ತಿ. ಆದರೆ ಸಂಘಟಿತರಲ್ಲ. ಹೋರಾಟ ಎನ್ನುವುದೇ ಕ್ಲೀಷೆಯಾಗಿದೆ. ಬಾಲಿಶವೆನಿಸಿದೆ. 

ಪ್ರಸಕ್ತ ಕೇರಳದ ಜಿಲ್ಲೆಯಾಗಿ 37ವರ್ಷ ಸಂದಾಗ ಕಾಸರಗೋಡು ಸಾಧಿಸಿದ್ದೇನು? ಇದು ಆತ್ಮಾವಲೋಕನಕ್ಕೆ, ಸಂವಾದಕ್ಕೆ ಸಕಾಲ. 
ರಾಜ್ಯ ಯಾವುದು ಉತ್ತಮ ಎಂದಲ್ಲ. ಕಾಸರಗೋಡನ್ನು ಕೇರಳೀಕರಿಸಿದ ಪರಿಣಾಮ ಈ ನೆಲದ  ತುಳು, ಕನ್ನಡ, ಕೊಂಕಣಿ ಸಹಿತ ಪ್ರಾದೇಶಿಕ ಬಹುಭಾಷಾ ಸಂಸ್ಕೃತಿ ನಾಶವಾಗಿದೆ!!
 ಭಾಷಿಕ ತೇಜೋವಧೆಯಾಗಿದೆ. ಆಚಾರಾನುಷ್ಠಾನಗಳೆಂಬ ನೆಲದ ಸಂಸ್ಕೃತಿ ವಿನಾಶವಾಗುತ್ತಿದೆ. ಅಸಂಖ್ಯರು ಈ ನೆಲ, ಜಲ ಬಿಟ್ಟು ವಲಸೆ ಹೋಗಿದ್ದಾರೆ. ಬದಲಿಗೆ ನಮ್ಮ ನೆಲದಲ್ಲಿ ನಮ್ಮದಲ್ಲದ ಕೇರಳೀಯತೆಯನ್ನು ಕಿತ್ತು ನೆಡಲಾಗಿದೆ. ಅದು ಬಲವಾಗಿ ಚಿಗುರುತ್ತಿದೆ ಕೂಡಾ.. 
ಒಂದು ನೆಲದ ಸಮಗ್ರ ಸಂಸ್ಕೃತಿ, ಆಚಾರವಿಚಾರ ವನ್ನು ರಾಜ್ಯ ವಿಸ್ತರಣೆಯ ದುರುದ್ದೇಶದಿಂದ ಬದಲಿಸುವುದೆಂದರೆಅದನ್ನನು ಏನೆಂದು ಹೆಸರಿಸಬೇಕು? 
ಇದು ಭಯೋತ್ಪಾದಕರ ಬಾಂಬಿನಷ್ಟೇ ಅಪಾಯಕಾರಿ ಕುಟಿಲತೆ. ಒಂದೆಡೆ ಭಾಷೆ, ಸಂಸ್ಕೃತಿ ಎಂದು ಮಾತಾಡುತ್ತಲೇ ಅನ್ಯ ಭಾಷಾಸಂಸ್ಕೃತಿಯ ನಿರ್ನಾಮ!! 
ಇದು ನ್ಯಾಯವೇ...???  ಕೇಳಲೇನು ಮುಜುಗರ?? 
ಇಲ್ಲಿ ನಡೆದಿರುವುದು ಸಹಜವಾದ ಸಾಂಸ್ಕೃತಿಕ ಸ್ಥಿತ್ಯಂತರ ಅಲ್ಲ. ಇದೊಂದು ಸಂಸ್ಕೃತಿಯ, ಜನಪದದ ಮೇಲಣ ಆಕ್ರಮಣದ ಸಾಮ್ರಾಜ್ಯ ವಿಸ್ತರಣೆಯ ಸಂಕೇತ! ಆದರೆ ಈ ಕುರಿತಾದ ಕಾಳಜಿಯ ಸೊಲ್ಲಡಗಿದೆ. ಹೋರಾಟ ನಿರ್ವೀರ್ಯವಾಗಿದೆ.! 
ಪ್ರತಿ ಚುನಾವಣೆ ಸಂದರ್ಭದಲ್ಲೊಮ್ಮೆ ಕಾಸರಗೋಡಿನ ಅಭಿವೃದ್ಧಿ ಕುರಿತ ಚರ್ಚೆ ಎಂಬ ಮೊಸಳೆ ಕಣ್ಣೀರು ಸುರಿಸಿ, ಜನರ ಕಣ್ಣಿಗೆ ಮಂಕುಬೂದಿ ಎರಚಲಾಗುತ್ತದೆಯೇ ವಿನಃ ಈ ನೆಲದ ಜನತೆಗೆ ನ್ಯಾಯ ದೊರಕಿಸುವ, ಅರ್ಹವಾದುದನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ. ಪರಿಣಾಮ ಜಿಲ್ಲೆ ಇಂದಿಗೂ ಕೈ ಚಾಚಿಕೊಂಡಿದೆ, ಪರಾವಲಂಬಿಯಾಗಿದೆ. 
ದ. ಕ ವನ್ನು ಅವಲಂಬಿಸಿಯೇ ಇದೆ..!!! 

ಕೇರಳ ಎಂಬುದು ಮಲಯಾಳಿಗಳದ್ದೆಂದೂ ಗಡಿನಾಡ ಬಹುಭಾಷಿಕರು ಅನ್ಯರು ಎಂಬಂತೆ ನೋಡುವ, ಪರಿಗಣಿಸುವ ದೃಷ್ಟಿಕೋನದಿಂದ ಗಡಿನಾಡಿಗೆ ಅನ್ಯಾಯವಾಗಿದೆ... 
ಪ್ರಸ್ತುತ... 40ವರ್ಷಗಳ ಬಳಿಕ ಮಂಜೇಶ್ವರದಿಂದ ಕನ್ನಡಿಗರೇ ಆದ ಶಾಸಕರು ವಿಧಾನಸಭೆ ಏರಿದ್ದಾರೆ. ಕನ್ನಡದಲ್ಲೇ ಪ್ರಮಾಣವಚನ ಮಾಡಿದ್ದಾರೆ. ಜಿಲ್ಲೆ ಉದಯಿಸಿದ ದಿನದಂದೇ ಅವರು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿರೋದು ಕಾಕತಾಳೀಯ. 
ಅವರಿಗೆ ಶುಭವಾಗಲಿ. ಅವರಿಂದ ಗಡಿನಾಡು ಅನೇಕವನ್ನು ನಿರೀಕ್ಷಿಸುತ್ತದೆ... 
+ ಎಂ. ನಾ. ಚಂಬಲ್ತಿಮಾರ್
 -----------------------------------

Comments