ಡ್ರೋನ್_ಪ್ರತಾಪನಿಂದ...ಇಂದಿನ_ರಾಜಕಾರಣದವರೆಗೆ...🛫 ✍🏻ಬರಹ: ಆಶಿಕ್_ಗೋಪಾಲಕೃಷ್ಣ

             ಹೌದು, ನಿನ್ನೆಯ #ಡ್ರೋನ್_ಪ್ರತಾಪ್  ಸಂದರ್ಶನ ನೋಡಿದಾಗ ನನಗೂ ಅನ್ನಿಸಿತ್ತು, ಒಂದು ಫೋನ್ ಮಾಡಿ ಆತನ ಬಗ್ಗೆ ನನಗೆ ಇದ್ದ ಅನೇಕ ಪ್ರಶ್ನೆಗಳನ್ನು ಕೇಳಿ ಬಿಡುವ ಅಂತ. ಸಂದರ್ಶನ ನೋಡಿದ ಕೆಲವರಿಗೆ ಆತನಿಗೆ ಫೋನ್ ಮಾಡಿ ಬೈದು ಬಿಡೋಣ ಅನ್ನಿಸಿದ್ದು ಇದೆ. ಅಷ್ಟಕ್ಕೂ ನಾನು ಈ ಹಿಂದೆ ಡ್ರೋನ್ ಪ್ರತಾಪ್ ನ ಬಗ್ಗೆ ಯಾವ ಪೋಸ್ಟ್ ಗಳನ್ನೂ ಶೇರ್ ಮಾಡಿಲ್ಲ, ಮತ್ತು ಭಾಷಣ ಕೇಳಿಯೂ ಇಲ್ಲ. ಮೊನ್ನೆ ಖಾಸಗಿ ವೆಬ್ ಸೈಟ್ ನಡೆಸಿದ #ಫ್ಯಾಕ್ಟ್_ಚೆಕ್ ಬಿಡುಗಡೆ ಆದ ಮೇಲೆ ಎಲ್ಲಾ ಹಿಂದಿನ ವಿಚಾರ, ಪೋಸ್ಟ್ ಗಳು, ಆತನ ಮಾತುಗಳು ಇವೆಲ್ಲ ಕೇಳಿದೆ. ಒಂದು ಮಾತಿದೆ "ಒಂದು ಸತ್ಯ ತಿಳಿದ ಮೇಲೆ ಒಬ್ಬ ವ್ಯಕ್ತಿ ನಮ್ಮ ಮುಂದೆ ಬಂದು ಅದೇ ವಿಷಯದ ಬಗ್ಗೆ ಸುಳ್ಳು ಹೇಳಿದರೆ ಅದನ್ನು ಕೇಳುವಾಗ ಏನೋ ಮುಖದಲ್ಲಿ ನಗು ಮತ್ತು ಅದು ಹಾಸ್ಯಾಸ್ಪದ ಎನಿಸಿಬಿಡುತ್ತದೆ". ನನಗೂ ಅದೇ ಆದದ್ದು.
          ಆದರೆ ಒಂದು ಮಾತು, ಇಂದು ನಮ್ಮ(ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಆತನ ಭಾಷಣ ಕೇಳಿ ಪೋಸ್ಟ್ ಶೇರ್ ಮಾಡಿದ ) ಮನದಲ್ಲಿ ಮೂಡಿದ ಪ್ರಶ್ನೆ ಅಂದು ಯಾಕೆ ಮೂಡಲಿಲ್ಲ? ಒಂದು ಕಡೆ ಆತ ಹೇಳುತ್ತಾನೆ...ಸಣ್ಣ ಸಣ್ಣ ಬ್ಯಾಗ್ ಮಾಡಿ ಒಟ್ಟು 360  ಕೆಜಿ ತೂಕದ ಒಟ್ಟು ಸಾಮಾನುಗಳನ್ನು ಏರ್ ಲೈನ್ಸ್ ಮೂಲಕ ಜಪಾನ್ ಗೆ ಕೊಂಡು ಹೋದೆ. ಅದು ಕೇಳಿದಾಕ್ಷಣ ಸುಳ್ಳು ಎಂಬುದು ಏರ್ ಲೈನ್ಸ್ ನಲ್ಲಿ ಹೋದ ಪ್ರತಿಯೊಬ್ಬನಿಗೂ ಗೊತ್ತು. ಆದರೂ ಅಂದು ನಮ್ಮ ಮನದಲ್ಲಿ ಅನುಮಾನ ಮೂಡಿದರೂ ನಾವು ಪ್ರಶ್ನೆ ಮಾಡಲಿಲ್ಲ...ಒಪ್ಪಿಕೊಳ್ಳೋಣ ನಾವ್ಯಾರು ಏರ್ ಲೈನ್ಸ್ ನಲ್ಲಿ ಪ್ರಯಾಣ ಮಾಡಿಲ್ಲ...ಹಾಗೆ ಗೊತ್ತಾಗಲಿಲ್ಲ...ಮತ್ತೆ ಮುಂದುವರೆದು  ಆ 360  ಕೆಜಿ ಒಟ್ಟು ತೂಕದ ಬೇರೆ ಬೇರೆ ಬ್ಯಾಗ್ ಗಳನ್ನು 8.5  ಕಿಲೋ ಮೀಟರ್ ನಡೆದುಕೊಂಡು ಅಲ್ಲಲಿ ಇಟ್ಟು ಎತ್ತಿಕೊಂಡು ಆ ಸ್ಥಳಕ್ಕೆ ಮುಟ್ಟಿಸುತ್ತಾನೆ. ಇದೂ ಸುಳ್ಳು...ಆದರೂ ನಾವು(ನನ್ನನ್ನು ಸೇರಿದಂತೆ) ಪ್ರಶ್ನಿಸಲಿಲ್ಲ..ಇನ್ನೂ ಮುಂದೆ ಹೋಗಿ ಕಲಿಯುವ ಸಂದರ್ಭ ಸತತ 8  ದಿನ ತಾನು ಉಪವಾಸ ಇದ್ದೆ. ಇದೂ ಸಾಧ್ಯವೇ? ಸುಳ್ಳು ಎಂಬುವುದು ಗೊತ್ತಿದ್ದೋ, ಅಥವಾ ಅನುಮಾನ ಇದ್ದರೂ ನಾವು ಇದ್ಯಾವುದನ್ನು ಅಂದು ಕೇಳಲೇ ಇಲ್ಲ. ಆದರೆ ಇಂದು ನಮ್ಮಲ್ಲಿ (ನನ್ನನ್ನೂ ಸೇರಿದಂತೆ ) ಕೇಳಲು ಪ್ರಶ್ನೆಗಳಿವೆ.
                     ಆತನ ಬಗ್ಗೆ ಇಷ್ಟು ಕೇಳಿದಾಗ ನಮ್ಮ ಸಹಜ ಗುಣ ಒಂದು ಅರ್ಥ ಆಯಿತು. ನಾವು ಯಾವುದನ್ನೂ ಕೇಳುವ ಸಮಯದಲ್ಲಿ ಅದು ಸುಳ್ಳೆಂದು ಗೊತ್ತಿದ್ದರೂ  ಪ್ರಶ್ನೆ ಮಾಡುವುದಿಲ್ಲ. ನಮಗೆ ಅದು ಸುಳ್ಳು ಎಂಬುದು ಗೊತ್ತಿದ್ದರೂ ನಾವು ಕೇಳಲು ಹೋಗುವುದಿಲ್ಲ. "#ನನಗೇತಕೆ?" ಎನ್ನುವ ಭಾವ. ಹೌದು ಇಲ್ಲಿ ನಾ ಹೇಳುತ್ತಿರುವುದು ಡ್ರೋನ್ ಪ್ರತಾಪ್ ನ ಬಗ್ಗೆ ನಿಜ..ಆದರೆ ಅದಕ್ಕೂ ಮೀರಿದ ಹಿಂದಿನಿಂದಲೂ  ಕೇಳಿದ ಕೋಟಿ ಕೋಟಿಗಳ ಸುಳ್ಳಿನ ಬಗ್ಗೆ. ಸ್ವಾತಂತ್ರ್ಯ ನಂತರ ಅಭಿವೃದ್ದಿಯ ಹೆಸರಿನಲ್ಲಿ ಅನೇಕ ಡಾಮ್, ರಸ್ತೆ ಕಾಮಗಾರಿಗಳು, ದೊಡ್ಡ ದೊಡ್ಡ ಪ್ರೊಜೆಕ್ಟ್ ಗಳು ನಡೆದಿವೆ...ಕೆಲವೊಂದು ಹಗರಣಗಳ ರೂಪದಲ್ಲಿ #ಸುಬ್ರಮಣ್ಯಂ_ಸ್ವಾಮಿ ಸೇರಿದಂತೆ ಅನೇಕ ಹಿರಿಯರ ಚಾಕಚಕ್ಯತೆಯಿಂದ ಬೆಳಕಿಗೆ ಬಂದಿದೆ. ಇಲಾಖೆಗಳು ಅದೆಷ್ಟೋ ಕೋಟಿ ಕೋಟಿಗಳ ಲೆಕ್ಕ ಈ ಹಿಂದಿನ 60  ವರ್ಷಗಳಿಂದ ನೀಡುತ್ತಲೇ ಇದೆ. ಕೆಲವೊಂದು ಸುಳ್ಳುಗಳು ಗೊತ್ತಿದ್ದರೂ, ನಾವು ಪ್ರಶ್ನಿಸುವುದಿಲ್ಲ. ಒಂದು ಸರಕಾರಿ ಕಾಮಗಾರಿಗೆ ಕೋಟಿ ಬಿಡುಗಡೆಯಾಗಿ, ಆ ಕಾಮಗಾರಿ ಮುಗಿದಾಗ ಅಷ್ಟು ಹಣ ಅದಕ್ಕೆ ಉಪಯೋಗ ಆಗಿಲ್ಲ ಎಂಬುದು ಕಣ್ಣಿಗೆ ಕಂಡರೂ ನಾವು (ನನ್ನನ್ನೂ ಸೇರಿದಂತೆ) ಪ್ರಶ್ನಿಸುವುದಿಲ್ಲ. ಕಾರಣ "ನನಗೇತಕೆ?" ಎನ್ನುವ ಭಾವನೆ.ಪ್ರಶ್ನೆ ಮಾಡುವುದಿಲ್ಲ ಎನ್ನುವ ಒಂದೇ ಒಂದು ಕಾರಣದಿಂದ ಹಿಂದಿನಿಂದಲೂ ಅಧಿಕಾರಿ ವರ್ಗ, ರಾಜಕಾರಣಿಗಳು ಕಳಪೆ ಕಾಮಗಾರಿ ನಡೆಸಿ ತಮ್ಮ ಜೇಬು ತುಂಬುತ್ತಿದ್ದಾರೆ.
                   ಒಬ್ಬ #ಶತಮಾನದ_ಶ್ರೇಷ್ಠ ವ್ಯಕ್ತಿಯ ಕೈಯ್ಯಲ್ಲಿ ಇಂದು ನಮ್ಮ ದೇಶ ಸುಭದ್ರವಾಗಿದೆ. ಆದರೆ ನಮ್ಮ ಊರು, ನಮ್ಮ ತಾಲೂಕು, ನಮ್ಮ ಜಿಲ್ಲೆ ಅಭಿವೃದ್ಧಿಯಾಗಬೇಕಾದರೆ ನಾವು(ನನ್ನನ್ನೂ ಸೇರಿದಂತೆ) ಪ್ರಶ್ನಿಸಬೇಕು. ಪ್ರತಿ ಹಂತದಲ್ಲೂ ಪಾರದರ್ಶಕತೆ ಅಗತ್ಯ. ಪ್ರಶ್ನಿಸುವ ಸಮಯದಲ್ಲಿ ಪ್ರಶ್ನಿಸಿದರೆ ಉತ್ತರ ನೀಡಲೇಬೇಕು. ಕಾಲ ಕಳೆದು ಹೋದರೆ ಹಿಂದಿನದ್ದನ್ನು ಎಲ್ಲರೂ ಮರೆತು ಬಿಡುತ್ತಾರೆ. ಅಂತೆಯೇ, ಎಲ್ಲಾ ಅಧಿಕಾರಿಗಳು ಮತ್ತು ರಾಜಕಾರಣಿಗಳ ಬಗ್ಗೆ ಖಂಡಿತ ಇಲ್ಲಿ ಹೇಳಿಲ್ಲ.. #ಸ್ವಂತಕ್ಕೆ_ಸ್ವಲ್ಪ, #ಸಮಾಜಕ್ಕೆ_ಸರ್ವಸ್ವ ಎಂದು ಬದುಕುವ ಅಧಿಕಾರಿ ವರ್ಗ, ಜನಪ್ರತಿನಿಧಿಗಳೂ ಹಿಂದೆಯೂ ಇದ್ದರು, ಇಂದೂ ನಮ್ಮ ನಡುವೆ ಇದ್ದಾರೆ. ಡ್ರೋನ್ ಪ್ರತಾಪ್ ಆಗಲಿ ಯಾರೇ ಆಗಲಿ, ಪ್ರಶ್ನೆ ಮಾಡುವ ಸಂದರ್ಭದಲ್ಲಿ ಪ್ರಶ್ನಿಸಿದರೆ ಅಂದೇ ಎಲ್ಲದಕ್ಕೂ ಪರಿಹಾರ ಸಿಗುತ್ತದೆ.

Comments