- Get link
- X
- Other Apps
- Get link
- X
- Other Apps
ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಪ್ರತಿಷ್ಠಾ ವರ್ಧಂತಿ ಕಾರ್ಯಕ್ರಮ ಮಂಗಳವಾರದಂದು ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.
ಈ ಸಂದರ್ಭದಲ್ಲಿ ಶ್ರೀಮಠದ ದಕ್ಷಿಣ ಗೋಪುರದ ಉದ್ಘಾಟನೆಯನ್ನು ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಶಿಲಾಫಲಕ ಅನಾವರಣ ಮಾಡುವ ಮೂಲಕ ಉದ್ಘಾಟಿಸಿದರು. ಇದೇ ವೇಳೆ ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರು ನಿತ್ಯಾನಂದ ಶ್ರೀಗುರುದೇವರ ಭಾವಚಿತ್ರವನ್ನು ಅನಾವರಣಗೊಳಿಸಿದರು.
ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಪ್ರವಾಸೋಧ್ಯಮ ಮತ್ತು ಬಂದರು ಖಾತೆ ಹಾಗೂ ನೌಕಾಯಾನ ಮತ್ತು ಜಲಸಾರಿಗೆ ಇಲಾಖೆಯ ರಾಜ್ಯ ಸಚಿವ ಶ್ರೀಪಾದ ಯಸ್ಸೋ ನಾಯಕ್ ಮಾತನಾಡಿ, ವಿಶ್ವಸುಖೀ ಆಗಲಿ ಎಂದು ಹಾರೈಸುವ ಹಿಂದೂ ಧರ್ಮದಲ್ಲಿ ಜನಿಸಿದ್ದು ನಮ್ಮ ಸೌಭಾಗ್ಯ. ಅದಕ್ಕೆ ಶಕ್ತಿ ನೀಡುವ ಕೇಂದ್ರವಾದ ಈ ಆಶ್ರಮಕ್ಕೆ ಪ್ರತಿಯೊಬ್ಬರೂ ಸಹಾಯಹಸ್ತ ನೀಡಿದಾಗ ಸಮಾಜದ ಆಧಾರಸ್ತಂಭ ಎಲ್ಲರೂ ಆಗುತ್ತಾರೆ ಎಂಬ ಭಾವದಿಂದ ನಾವು ತೊಡಗಿಸಿಕೊಳ್ಳೋಣ ಎಂದು ತಿಳಿಸಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಈ ಆಶ್ರಮದಿಂದ ಸಮಾಜಕ್ಕೆ ಇನ್ನಷ್ಟು ಒಳಿತಾಗಲಿ. ಶ್ರೀ ಸ್ವಾಮೀಜಿಯವರ ಮಾತು ಜಗತ್ತಿಗೇ ಮಾರ್ಗದರ್ಶನ ನೀಡುವಂತಾಗಲಿ ಎಂದು ಹಾರೈಸಿದರು.
ಶ್ರೀಮಠದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ಆಶೀರ್ವಚನ ನೀಡಿ, ಕಾರ್ಯಕರ್ತರ ಆಹೋರಾತ್ರಿಯ ಶ್ರಮವನ್ನು ಶ್ರೀಗುರುಗಳಿಗೆ ಸಮರ್ಪಿಸಿ ಈ ಆಶ್ರಮ ಬೆಳೆಯಲು ಕಾರಣಕರ್ತರಾಗಿದ್ದಾರೆ. ಸಮಸ್ತ ಸಮಾಜಕ್ಕೆ ಒಳ್ಳೆಯ ದಾರಿಯನ್ನು ತೋರಿಸಿಕೊಟ್ಟು ಸಮಾಜ ಬೆಳೆಯಲಿ ಎಂದು ಹಾರೈಸಿದರು.
ದಿವ್ಯ ಉಪಸ್ಥಿತರಿದ್ದ ಬ್ರಹ್ಮಶ್ರೀ ಅನಂತಪದ್ಮನಾಭ ಆಸ್ರಣ್ಣ ಕಟೀಲು ಮಾತನಾಡಿ, ಗಾಯತ್ರೀ ದೇವಿಯ ಅನುಗ್ರಹ, ನಿತ್ಯಾನಂದ ಗುರುಗಳ ಪರಮಸಾನ್ನಿಧ್ಯ ಇರುವ ಇಲ್ಲಿ ಧರ್ಮಮಾರ್ಗದಲ್ಲಿ ನಾವು ನಡೆದು ಜೀವನದಲ್ಲಿ ಕುಂದುಕೊರತೆಗಳಿಲ್ಲದಂತೆ ಜೀವನ ಸಾಗಿಸೋಣ ಎಂದು ಹಾರೈಸಿದರು.
ಬ್ರಹ್ಮಶ್ರೀ ಕಮಲಾದೇವಿ ಪ್ರಸಾದ ಆಸ್ರಣ್ಣ ಕಟೀಲು, ಕೇರಳ ಧರ್ಮಾಚಾರ್ಯ ಸಭಾದ ರಾಜ್ಯ ಪ್ರಧಾನ ಸಂಚಾಲಕ ಬ್ರಹ್ಮಶ್ರೀ ಮುಲ್ಲಪ್ಪಳ್ಳಿ ಕೃಷ್ಣನ್ ನಂಬೂದಿರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಠದ ವಿಶ್ವಸ್ಥರಲ್ಲಿ ಓರ್ವರಾದ ಕೆ. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರನ್ನು ಧಾರ್ಮಿಕ ಸಹಭಾಗಿತ್ವ, ಸಮಾಜ ಸೇವೆಗಳ ಸುದೀರ್ಘ ತತ್ಪರತೆಗಾಗಿ ಗಣ್ಯರ ಉಪಸ್ಥಿತಿಯಲ್ಲಿ ಕೊಂಡೆವೂರು ಶ್ರೀಗಳು ಗೌರವಿಸಿದರು.
ರಾಜ್ಯಸಭಾ ಸದಸ್ಯರಾದ ಕೆ.ಸಿ.ರಾಮಮೂರ್ತಿ, ಕೆ.ನಾರಾಯಣ ಸ್ಪಾನ್ ಪ್ರಿಂಟ್ಸ್ ಬೆಂಗಳೂರು, ಉದ್ಯಮಿ ಕೆ.ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಡಾ.ಎಂ.ಮೋಹನ ಆಳ್ವ ಮೂಡಬಿದ್ರೆ, ನಾರಾಯಣ ಹೆಗ್ಡೆ ಕೋಡಿಬೈಲು, ಉದ್ಯಮಿ ಮಹಾಬಲೇಶ್ವರ ಭಟ್ ಎಡಕ್ಕಾನ, ಹರಿನಾಥ ಭಂಡಾರಿ ಮುಳಿಂಜ, ಡಾ.ಆಶಾಜ್ಯೋತಿ ರೈ ಮಂಗಳೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ವಿಧಾನ ಪರಿಷತ್ತು ಮಾಜೀ ಸದಸ್ಯ ಕೆ.ಮೋನಪ್ಪ ಭಂಡಾರಿ ಸ್ವಾಗತಿಸಿ, ಅಧ್ಯಾಪಿಕೆ ಮೀರಾ ಆಳ್ವ ಬೇಕೂರು ವಂದಿಸಿದರು. ದಿನಕರ ಹೊಸಂಗಡಿ, ಅಶೋಕ ಬಾಡೂರು ಕಾರ್ಯಕ್ರಮ ನಿರೂಪಿಸಿದರು. ದಿವ್ಯಾ ಕಾರಂತ ಪ್ರಾರ್ಥಿಸಿದರು.
- Get link
- X
- Other Apps
Comments
Post a Comment