- Get link
- X
- Other Apps
- Get link
- X
- Other Apps
ಯುಗ ನಿರ್ಮಿಸಿದ ಹೃದ್ಯ ಕಲಾವಿದ ಪದ್ಯಾಣ..
--------------------------------------------------------------
ಗಾನಯಾನದಲ್ಲಿ 5ದಶಕದ ಜೈತ್ರಯಾತ್ರೆ ನಡೆಸಿ ತೆಂಕಣ ಭಾಗವತಿಕೆಗೆ ರಂಜನೀಯ ಭಾವದ ನವ ಭಾಷ್ಯವನ್ನಿತ್ತ ಭಾಗವತಶ್ರೇಷ್ಠ ಪದ್ಯಾಣರು ತನ್ನ ಪದಯಾನಕ್ಕೆ ಕೊನೆಯ ಚುಕ್ಕಿಯನ್ನಿಟ್ಟಿದ್ದಾರೆ..
ಪದ್ಯಾಣ ಎಂಬ ಹೆಸರಲ್ಲೇ ಪದ್ಯವಿದೆ...
ಅದಕ್ಕೆ ಪೂರಕವಾಗಿ ತೆಂಕಣ ಭಾಗವತಿಕೆಗೆ ಪದ್ಯದ ಚೆಲುವು, ಗಾನದ ಇಂಪು ಕೊಟ್ಟವರು ಪದ್ಯಾಣರು.
ಅವರು ಹಳತರೊಂದಿಗೆ ಹೊಸ ತಲೆಮಾರನ್ನು ರಂಗಸ್ಥಳದತ್ತ ಗಾನದ ಚುಂಬಕ ಶಕ್ತಿಯಿಂದ ಸೆಳದವರು. ಅವರ ಪದಯಾನದ ಕಥನಗಳೇ ರೋಚಕ ಅಧ್ಯಾಯ.
ಚೌಡೇಶ್ವರಿ ಮೇಳದಲ್ಲಿ ದಾಸರಬೈಲು ಚನಿಯ ನಾಯ್ಕ ರೊಂದಿಗೆ ಮದ್ದಳೆ ವಾದಕರಾಗಿ ಯಕ್ಷಜೀವನ ಆರಂಭ.
ಅದು ಪೂರ್ಣಾವಧಿ ಆಟ ಇಲ್ಲದ ಮೇಳ. ಆದ್ದರಿಂದ ಅದೇ ಭಾಗವತರೊಂದಿಗೆ ಪೆರಾಜೆ ಮೇಳದಲ್ಲೂ ತಿರುಗಾಟ..
ಒತ್ತು ಮದ್ಲೆ, ಸಂಗೀತಗಾರಿಕೆಯೊಂದಿಗೆ ರಂಗವನ್ನೇ ಪಠ್ಯವಾಗಿಸಿಕೊಂಡ ಪದ್ಯಾಣರು ಆ ಬಳಿಕದ ಯಾನದಲ್ಲಿ ರಂಗಸ್ಥಳದ ಸರ್ವಾಧ್ಯಕ್ಷನಾಗಿ ಭಾಗವತಿಕೆಯ ಸಾರ್ವಭೌಮತ್ವ ಮೆರೆದದ್ದು ಇತಿಹಾಸ....
ರಂಗಸ್ಥಳದಲ್ಲಿ ಪದ್ಯಾಣರೇ ನಾಯಕ. ಅವರು ಹಿಮ್ಮೇಳ ಮುಮ್ಮೇಳ ಶೋಭಿಸಿ ಮುನ್ನಡೆಸುವ ಪರಿಯೇ ಅನನ್ಯ.
ಯಾವುದೇ ಪ್ರಸಂಗವಾದರೂ ಅವರು ರಸವರಿತು ಹಾಡಿ ಪ್ರದರ್ಶನ ಗೆಲ್ಲಿಸುವವರು. ಭಾವಗತಿಸದೇ ಹಾಡಿ ಹಿಮ್ಮೇಳ ವಿಜೃಂಭಿಸುವವರು..
ಅವರು ಪದ್ಯಾಣ ತಿರುಮಲೇಶ್ವರ ಭಟ್ -ಸಾವಿತ್ರಿ ದಂಪತಿಯರ ಮೂರನೇ ಮಗ. ಶಾಲೆಗೆ ತೆರಳಿ ಕಲಿತದ್ದು ಅಷ್ಟಕ್ಕಷ್ಟೇ. ಆದರೆ ಯಕ್ಷಗಾನ, ಸಂಗೀತಾಸಕ್ತಿ ವಂಶವಾಹಿ.
ಅಜ್ಜ ಪದ್ಯಾಣ ಪುಟ್ಟು ನಾರಾಯಣ ಭಾಗವತರು ಹಿಂದಿನ ಕಾಲದ ಪ್ರಸಿದ್ಧ ಭಾಗವತರು. ಪದ್ಯಾಣರ ಗುರು ಹಿರಿಯ ಮಾಂಬಾಡಿಯವರು ಕೂಡಾ ಪುಟ್ಟಜ್ಜನದೇ ಶಿಷ್ಯ..
ಇಂಥ ಅಜ್ಜನ ನೆರಳಿನಲ್ಲಿ ಗಣಪಣ್ಣನಿಗೆ ಭಾಗವತಿಕೆಯ ಬಾಲಪಾಠವಾಗಿತ್ತು. ಅನಂತರ ಮಾಂಬಾಡಿ ನಾರಾಯಣ ಭಾಗವತರಲ್ಲಿ ಶಾಸ್ತ್ರೀಯ ಕಲಿಕೆ. ಅನಂತರ 16ರ ಹರೆಯದಲ್ಲೇ ಒತ್ತು ಮದ್ದಳೆ, ಸಂಗೀತಗಾರನಾಗಿ ಮೇಳ ತಿರುಗಾಟಕ್ಕೆ ಹೊರಟ ಪದ್ಯಾಣರು ಆಟದ ಕಳದಲ್ಲಿ ಹತ್ತರೊಟ್ಟಿಗೆ ಹನ್ನೊಂದಾಗಲಿಲ್ಲ. ಅವರು ತನ್ನದೇ ಶೈಲಿಯ ಹೊಸ ಶಕೆಯ ನಿರ್ಮಾತ್ರೃ ಆದರು. ಕ್ರಿಯಾಶೀಲತೆ, ಪ್ರಯೋಗಶೀಲತೆಗೆ ರಂಗಸ್ಥಳವನ್ನೇ ಬಳಸಿ ಗೆದ್ದರು. ತನ್ಮೂಲಕ ಯಕ್ಷಗಾನದ ಹೊಸ ಶಕೆಗೆ ಭದ್ರ ಬುನಾದಿ ಹಾಕಿದರು...
ಗಣಪಣ್ಣ ಮೊದಲು ಭಾಗವತರಾಗಿ ಸೇವೆ ಸಲ್ಲಿಸಿದ್ದು ಕುಂಡಾವು ಮೇಳದಲ್ಲಿ. ಸಂಗೀತ, ಭಾಗವತಿಕೆ, ಮದ್ಲೆಗಾರ ಹೀಗೆ ಮೇಳಕ್ಕವರು ಎಲ್ಲವೂ ಆಗಿದ್ದರು. ಆಗ ಹಾಡುವುದೆಂದರೆ ಚಟ!
ಒಮ್ಮೆ ಗಣಪಣ್ಣನೇ ಹೇಳಿದ್ದರು "ನನಗಾಗ ನಿಜಕ್ಕೂ ಹಾಡುವಾಸೆಯ ಚಟ. ಮೇಳ ತಿರುಗಾಟ ಮುಗಿದೊಡನೆ ಹಾಡುವ ಅವಕಾಶಕ್ಕಾಗಿಯೇ ನಾನು ಚಿಕ್ಕಮೇಳದಲ್ಲಿ ಹೋಗುತ್ತಿದ್ದೆ. ಹೀಗೊಮ್ಮೆ ನನ್ನ ಪದ್ಯ ಗಮನಿಸಿದ ವೇಣೂರು ಸುಂದರ ಆಚಾರ್ರು ಮತ್ತು ಶಿವರಾಮ ಜೋಗಿಯವರು "ನಮ್ಮ ಮೇಳಕ್ಕೆ (ಸುರತ್ಕಲ್) ಮೇಳಕ್ಕೆ ಬರ್ತೀಯಾ ಅಂತ ಕರೆದರು. ಆಗಂತೂ ಸುರತ್ಕಲ್ ಮೇಳ ಎಂದರೆ ಪ್ರತಿಷ್ಠಿತ ಗಜಮೇಳ.
ಅದರಲ್ಲಿ ಕಲಾವಿದನಾಗುವುದೆಂದರೆ ಅದು ಸ್ಟಾರ್ ವ್ಯಾಲ್ಯೂ ಅಂಗೀಕಾರ..
ಅವಕಾಶ ಇದ್ದರೆ ಬರುತ್ತೇನೆಂದೆ. ನನಗವರು ಅವಕಾಶ ಒದಗಿಸಿದರು. ಇಲ್ಲಿಂದಾಚೆಗೆ ನನ್ನ ಭಾಗವತಿಕೆಯ ಬದುಕಿನ ಪಥವೇ ಬದಲಾಯಿತೆಂದು ಜೀವನ ಕಥನಗಳನ್ನೆಲ್ಲ ಬಚ್ಚಿಡದೇ ಪುತ್ತೂರಿನ ಮನೆಯಲ್ಲಿ ಬಿಚ್ಚಿಟ್ಟಿದ್ದರು ಗಣಪಣ್ಣ...
ಅದು ಸುರತ್ಕಲ್ ಮೇಳದಲ್ಲಿ ಅಗರಿ ಭಾಗವತರು ಮೆರೆಯುವ ಕಾಲ. ಆಗ ಒತ್ತುಮದ್ದಳೆ, ಅನಿವಾರ್ಯಕ್ಕೆ ಚೆಂಡೆ, ಸಂಗೀತಗಾರನಾಗಿ ಮೇಳ ಸೇರಿದವರು ಬೇಗನೆ ಭಾಗವತರಾದರು. ಇವರ ಸಂಗೀತ ಮಾಧುರ್ಯದ ಪದಗಳು ಪ್ರೇಕ್ಷಕರನ್ನು ಹುಚ್ಚೆಬ್ಬಿಸಿತು. ಅಗರಿಯವರಂತೂ ಸಂಪ್ರದಾಯ ಶೈಲಿ ಬಿಟ್ಟು ಕದಲುತ್ತಿರಲಿಲ್ಲ. ಆದರೆ ಪದ್ಯಾಣರು ಅಗರಿ ನೆರಳಿನಲ್ಲೇ, ಸಂಪ್ರದಾಯ ಬದ್ದತೆಯಲ್ಲೇ ನವ್ಯ ಶೈಲಿಯ ಮೊರೆ ಹೋದರು. ಸಾಮಾಜಿಕ ಆಯಾಮದ ನೂತನ ಪ್ರಸಂಗಗಳನ್ನು ಸಂಗೀತ ರಸಾತ್ಮಕತೆಯಿಂದಲೇ ಹಾಡಿ ಮೆರೆಸಿದರು. ಪದ್ಯಾಣರ ಈ ಪ್ರಯೋಗಶೀಲತೆಗೆ ಕಲಾವಿದರಿಂದ ಭರಪೂರ ಸಹಕಾರ, ಪ್ರೋತ್ಸಾಹ ಸಿಕ್ಕಿತು. ಅದು ಪದ್ಯಾಣ ಗಾನಶೈಲಿಯೊಂದಿಗೆ ಪದ್ಯಾಣರೆಂಬ ಹೊಸ ಸಮರ್ಥ ಭಾಗವತರ ತಾರೋದಯಕ್ಕೆ ಕಾರಣ ಆಯಿತು...
ಮುಂದೆ ಸುರತ್ಕಲ್ ಮೇಳದ ಭಾಗವತಿಕೆಯ ಚುಕ್ಕಾಣಿಯೇ ಪದ್ಯಾಣರದ್ದಾಯಿತು. ಅವರು ಮೆರೆದದ್ದಷ್ಟೇ ಅಲ್ಲ ಸತಿಶೀಲಾವತಿ, ರಾಣಿ ರತ್ನಾವಳಿ , ಕಡುಗಲಿ ಕುಮಾರರಾಮ, ಪಾಪಣ್ಣವಿಜಯ ಗುಣಸುಂದರಿ, ಬಪ್ಪನಾಡು ಕ್ಷೇತ್ರ ಮಹಾತ್ಮೆ,ನಾಟ್ಯರಾಣಿ ಶಾಂತಲ, ತುಳುನಾಡಸಿರಿ, ರಾಜಾ ಯಯಾತಿ ಸೇರಿದಂತೆ ಪ್ರತಿವರ್ಷ ಒಂದರಬೆನ್ನಿಗೊಂದು ಸೂಪರ್ ಹಿಟ್ ಪ್ರಸಂಗಗಳನ್ನು ಮೆರೆಸಿದರು..
ಅದೆಲ್ಲವೂ ತೆಂಕಣ ಯಕ್ಷಗಾನದಲ್ಲಿ ಅಳಿಸಲಾಗದ ದಾಖಲೆಯ ಚರಿತ್ರೆಗಳು...!
ಆಗ ಸುರತ್ಕಲ್ ಮೇಳದಲ್ಲಿ ಶೇಣಿಯವರಿದ್ದರು.
ಅವರು ಪದ್ಯಾಣರ ನವೀನ ಪ್ರಯೋಗಕ್ಕೆ, ಯಶಸ್ವಿ ಓಟಕ್ಕೆಸಾಥ್ ನೀಡಿದರು. ತನ್ನ ತಾಳಮದ್ದಳೆಗಳಿಗೆಲ್ಲ ಪದ್ಯಾಣರನ್ನೇ ಒಯ್ದರು. ಹೀಗೆ ಆಟ -ಕೂಟದಲ್ಲಿ ಶೇಣಿ ಸಾಂಗತ್ಯ ದಲ್ಲಿ ನವಯುಗ ನಿರ್ಮಿಸಿದ ಪದ್ಯಾಣರ ಪದವೈಭವ 80-90ದಶಕದಲ್ಲಿ ತೆಂಕಣದಲ್ಲಿ ರಂಗಕ್ಕೆ ರಾಗರಂಜನೆಗಳ ರಾಜವೈಭವ ತಂದಿತ್ತು...
ಒಂದು ಪ್ರದರ್ಶನವನ್ನು ಸಮತೋಲಿತವಾಗಿ ಗೆಲ್ಲಿಸಿಕೊಡುವವನೇ ನಿಜವಾದ ಯಶಸ್ವಿ ಭಾಗವತ. ಕೇವಲ ಶಾರೀರ ಇರುವಾತ ಉತ್ತಮ ಹಾಡುಗಾರ ಆದಾನು ಅಷ್ಟೇ..
ಆದರೆ ಭಾಗವತ ಎನಿಸಿಕೊಂಡವ ಸಮಗ್ರ ರಂಗವನ್ನಾಳಬೇಕು. ಪ್ರಸಂಗವನ್ನು ಆಡಿಸಿ ಗೆಲ್ಲಿಸಬೇಕು. ಈ ತಾಕತ್ತು, ಪರಿಜ್ಞಾನ ಗಣಪಣ್ಣನಲ್ಲಿತ್ತು. ಅವರು ಹಿಮ್ಮೇಳ ಸಾರಥಿಯಾಗಿದ್ದರೆ ಪ್ರಸಂಗಕ್ಕೆ ಯಾವ ಲೋಪವೂ ಇಲ್ಲ. ಕಲಾವಿದರ ಮನಸ್ಥಿತಿ, ಸಾಮರ್ಥ್ಯ, ಅರಿತು ಹಾಡಬಲ್ಲ ಅದ್ಬುತ ಸಿದ್ಧಿ, ರಂಗದ ಹಿಡಿತ ಅವರದ್ದು.
ಯಕ್ಷಗಾನ ಭಾಗವತಿಕೆಯನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಆಕರ್ಷಣೀಯವಾಗಿ ಕೈ ದಾಟಿಸಿದವರಲ್ಲಿ ಪದ್ಯಾಣರು ಪ್ರಮುಖರು. ಸಂಪ್ರದಾಯದ ಆವರಣದಿಂದಲೇ, ಪರಿಧಿ ಬಿಡದೇ, ಸಮಕಾಲೀನ ಮನೋಧರ್ಮಕ್ಕೆ ಒಗ್ಗುವಂತೆ ಆಧುನೀಕರಿಸಿ ಎರಡೂ ತಲೆಮಾರಿನ ಪ್ರೇಕ್ಷಕರ ಹೃದಯಗೆದ್ದ ಗಣಪಣ್ಣ ಹೃದ್ಯ ಭಾಗವತರು, ಹೃದಯವಂತ ಮನುಷ್ಯ..
ಅವರು ಸುಲಭದಲ್ಲಿ ಕಲಾವಿದರೊಂದಿಗೆ ಬೆರೆಯುತ್ತಿದ್ದರು. ಅವರ ಮನೋಸ್ಥಿತಿ ಅರಿಯುತ್ತಿದ್ದರು. ಹಾಸ್ಯ ಚಟಾಕಿಗಳೊಂದಿಗೆ ಲವಲವಿಕೆಯ ಜೋಷ್ ನಲ್ಲಿರುತ್ತಿದ್ದರು. ಅವರಿದ್ದಲ್ಲಿ ಜೀವನ್ಮುಖಿತನವಿತ್ತು..
ವೈವಿಧ್ಯ ಮನೋರಂಜನೆಗಳ ನಡುವೆ ಬದುಕುವ ವರ್ತಮಾನದ ಪ್ರೇಕ್ಷಕನಿಗೆ ಯಕ್ಷಗಾನ ರುಚಿಸಬೇಕಿದ್ದರೆ, ಆತನನ್ನು ರಂಗಸ್ಥಳದತ್ತ ಸೆಳೆಯಬೇಕಿದ್ದರೆ ಕಲಾತ್ಮಕ ಅರಿವಿನ ಸೃಜನಶೀಲ ಪ್ರಯೋಗಗಳು ಯಕ್ಷಗಾನಕ್ಕೆ ನಿರಂತರ ಅಗತ್ಯ ಎನ್ನುತ್ತಿದ್ದರು ಗಣಪಣ್ಣ...
ಅವರು ಮೃದು ಹೃದಯಿ, ಭಾವಜೀವಿ. ಸರಳ ಮನುಷ್ಯ. ಅವರು ಯಕ್ಷಗಾನಕ್ಕೆ ಹೊಟ್ಟೆ ಹೊರೆಯಲೆಂದು ಬಂದವರಲ್ಲ. ಅವರಿಗೇನೇನೂ ಬಡತನ ಇರಲಿಲ್ಲ. ಆದರೆ ಶಾಲೆಗೆ ಹೋಗದೇ ಗುಡ್ಡೆಯಲ್ಲಡಗಿ ಅಪ್ಪನ ಕಣ್ತಪ್ಪಿಸುತ್ತಿದ್ದವರನ್ನು ಯಕ್ಷಗಾನ ಕಲಿಯಲೆಂದು ದುಡ್ಡು ಕೊಟ್ಟು ಕಳಿಸಿದ್ದೇ ಅಮ್ಮ.. !!
ಹೀಗೆ ಅಮ್ಮನಾಸೆಯಂತೆ ತನ್ನ ಅಪಾರ ಆಸಕ್ತಿಯಿಂದಲೇ ಕಲಾವಿದನಾದ ಗಣಪಣ್ಣ ಒಂದು ಯುಗ ನಿರ್ಮಿಸಿ ಹೊರಟಿದ್ದಾರೆ... ,ಚರಿತೆ ಬರೆದು ನಿರ್ಗಮಿಸಿದ್ದಾರೆ.
ಅದರ ನೆನಪುಗಳು ನಮ್ಮೆಲ್ಲರೊಳಗೆ ಬೆಚ್ಚಗಿರಲಿ.
ಅವರಿಗೆ ಕಂಬನಿಯ ವಿದಾಯ...
- ಎಂ. ನಾರಾಯಣ ಚಂಬಲ್ತಿಮಾರ್
-------------------------------------------------
- Get link
- X
- Other Apps
Comments
ಹೃದ್ಯ ಬರೆಹ
ReplyDeleteಉತ್ತಮ ಬರಹ. ಪದ್ಯಾಣರ ಹೃದಯವಂತಿಕೆ ಸವಿನೆನಪು
ReplyDeleteಧನ್ಯವಾದಗಳು
ReplyDelete