ತಳಂಗರೆಯಲ್ಲಿ ಪರಂಪರಾಗತ ಪ್ರವಾಸೋದ್ಯಮ ಪಾರ್ಕ್ ನಿರ್ಮಾಣಕ್ಕೆ ತೀರ್ಮಾನ: ಬಂದರು ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧಾರ

ತಳಂಗರೆಯಲ್ಲಿ ಪರಂಪರಾಗತ ಪ್ರವಾಸೋದ್ಯಮ ಪಾರ್ಕ್ ನಿರ್ಮಾಣಕ್ಕೆ ತೀರ್ಮಾನ: ಬಂದರು ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧಾರ 
ಕಾಸರಗೋಡು, ಜು.17: ತಳಂಗರೆಯಲ್ಲಿ ಬಂದರು ಇಲಾಖೆ ವತಿಯಿಂದ ಪರಂಪರಾಗತ ಪ್ರವಾಸೋದ್ಯಮ ಪಾರ್ಕ್ ನಿರ್ಮಾಣ ನಡೆಸಲು ತೀರ್ಮಾನಿಸಲಾಗಿದೆ.  
                              ಬಂದರು ಸಚಿವ ಅಹಮ್ಮದ್ ದೇವರ್ ಕೋವಿಲ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 
                                ಕಾಸರಗೋಡು ಜಿಲ್ಲೆಯ ಅತಿ ಉದ್ದದ ನದಿ ಚಂದ್ರಗಿರಿಯ ಅಳಿವೆ, ತೀರ ಪ್ರದೇಶಗಳನ್ನು ಕೇಂದ್ರೀಕರಿಸಿ ಪ್ರವಾಸೋದ್ಯಮ ಇಲಾಖೆ ಸಿದ್ಧಪಡಿಸಿರುವ 10.74 ಕೋಟಿ ರೂ.ನ ಯೋಜನೆಯನ್ನು ಬಂದರು ಇಲಾಖೆಯ ಸ್ವಾಮ್ಯದ ಜಾಗದಲ್ಲಿ ಜಾರಿಗೊಳಿಸಲಾಗುವುದು. 
P-2                                 ಹಿಂದೆ ಕಾಸರಗೋಡಿನ ಪ್ರಧಾನ ವ್ಯಾಪಾರ ಕೇಂದ್ರವಾಗಿದ್ದ ತಳಂಗರೆಯ ಇತಿಹಾಸ ತಿಳಿಸುವ ಮೂಲಗಳ, ಪ್ರವೇಶ ದ್ವಾರದ ಮಾದರಿಯಲ್ಲಿ ಸ್ಮಾರಕ ದಾಸ್ತಾನಿಗೃಹ, ಹಳೆಯ ಬಂದಿರಿನ ಅಂಗವಾಗಿರುವ ಸೇತುವೆ , ಕಟ್ಟಡಗಳ ನವೀಕರಣ ಮೂಲಕ ಇಲ್ಲಿ ಪ್ರಧಾನ ಆಕರ್ಷಣೆಯಾಗಲಿವೆ. ಜತೆಗೆ ಜಲಸಂಚಾರಕ್ಕೆ ಬೋಟಿಂಗ್, ಕಯಾಕಿಂಗ್ ಸೌಲಭ್ಯ, ಕಿಯಾಸ್ಕ್ ಗಳು, ಪವೆಲಿಯನ್, ಮೈದಾನ, ಕಾಲ್ನಡಿಗೆ ಹಾದಿ, ಕಾರ್ಕಿಂಗ್ ಏರಿಯಾ ಇತ್ಯಾದಿ ಯೋಜನೆಯಲ್ಲಿ ಅಳವಡಗೊಳ್ಳಲಿದೆ. 
                                ಈ ಯೋಜನೆ ನನಸಾಗುವ ಮೂಲಕ ಚಂದ್ರಗಿರಿ ಕೋಟೆಗೆ ಪ್ರವಾಸಿಗರ ಆಗಮನ ಸಂಖ್ಯೆ ಅಧಿಕಗೊಳ್ಳುವ ನಿರೀಕ್ಷೆಯಿದೆ. ಜಲಹಾದಿ ಮೂಲಕ ಕಾಸರಗೋಡಿನಿಂದ ಈ ಪ್ರದೇಶಕ್ಕಿರುವ ದೂರವೂ ಕಡಿಮೆಯಾಗಲಿದೆ. 
                                 ಸದ್ರಿ ಜೈವಿಕ ವಿವಿಧತೆ ಯಥಾವತ್ತಾಗಿ ಉಳಿಸಿ ಕರಾವಳಿ, ಪರಂಪರೆ, ಪರಿಸರ ಪ್ರವಾಸೋದ್ಯಮ ಸಾಧ್ಯತೆಗಳನ್ನು ಇಲ್ಲಿ ಬಳಸಲಾಗುವುದು. 
                                 ಬೇಕಲದ ನಂತರ ಕಾಸರಗೋಡು ಜಿಲ್ಲೆಯಲ್ಲಿ ನಿರ್ಮಿಸಲಾದ ಸರಿಸುಮಾರು 380 ವರ್ಷಗಳ ಹಿಂದಿನ ಕಾಲದ ಅಂದಾಜಿನ ಚಂದ್ರಗಿರಿ ಕೋಟೆ, ಕೇರಳದ ದ್ವಿತೀಯ ಬೃಹತ್ ಮಸೀದಿಯಾಗಿರುವ ಮಾಲೀಕ್ ದೀನಾರ್ ಮಸೀದಿ ಸಹಿತ ಚಂದ್ರಗಿರಿ ನದಿ ತೀರದಲ್ಲಿ ಅನೇಕ ಪರಂಪರಾಗತ ಕೇಂದ್ರಗಳು, ನದಿ ತೀರದ ಸೌಂದರ್ಯ, ಕುದ್ರುಕಾಡಿನ ಹಸುರಿನ ಸಿರಿ ಪ್ರವಾಸಿಗರನ್ನು ಸೆಳೆಯಲಿವೆ. 
                              ಇದರೊಂದಿಗೆ ಸಮೀಪದ ರಸ್ತೆಯ ಉಭಯಬದಿಗಳಲ್ಲಿ ಸ್ಥಳೀಯ ಕಲಾಕೃತಿಗಳ ಮಾರಾಟ ಸ್ಟಾಲ್ ಗಳನ್ನು ಸಜ್ಜುಗೊಳಿಸಲಾಗುವುದು. ತಳಂಗರೆಯ ನಿವಾಸಿಗಳ ಸಹಕಾರದೊಂದಿಗೆ ಈ ಸ್ಟಾಲ್ ಗಳು ಚಟುವಟಿಕೆ ನಡೆಸಲಿವೆ. ತಳಂಗರೆ ಟೊಪ್ಪಿ, ಕಾಸರಗೋಡು ಸೀರೆ ಸಹಿತ ಕಾಸರಗೋಡಿನ ಮೂಲ ಉತ್ಪನ್ನಗಳ ಮಾರಾಟ ಸಾಧ್ಯತೆಗಳ ಗಣನೆಯೊಂದಿಗೆ ಪವೆಲಿಯನ್ ಸಿದ್ಧಗೊಳ್ಳಲಿದೆ. 
                                 ಸಭೆಯಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್, ಕಾಸರಗೋಡು ನಗರಸಭೆ ಅಧ್ಯಕ್ಷ ನ್ಯಾಯವಾದಿ ವಿ.ಎಂ.ಮುನೀರ್, ಸಹಾಯಕ ಜಿಲ್ಲಾಧಿಕಾರಿ(ಎಲ್.ಆರ್.) ಕೆ.ರವಿಕುಮಾರ್, ಡಿ.ಟಿ.ಪಿ.ಸಿ. ಕಾರ್ಯದರ್ಶಿ ಬಿಜು ರಾಘವನ್, ಬಿ.ಆರ್.ಡಿ.ಸಿ. ಸಹಾಯಕ ಪ್ರಬಂಧಕ ಪಿ.ಸುನಿಲ್ ಮೊದಲಾದವರು ಉಪಸ್ಥಿತರಿದ್ದರು. ಆರ್ಕಿಟೆಕ್ಟ್ ಸಿ.ವಿ.ನಂದು ಯೋಜನೆ ಪ್ರಸ್ತುತಪಡಿಸಿದರು. 

Comments