ವಿದ್ಯಾರಂಗದ ಮೂಲಕ ವಿವಿಧ ಸಾಹಿತ್ಯ ಪ್ರಕಾರಗಳನ್ನು ಪರಿಚಯಿಸಬೇಕು --ಕೃಷ್ಣೋಜಿ ಮಾಸ್ಟರ್

 ವಿದ್ಯಾರಂಗದ ಮೂಲಕ ವಿವಿಧ ಸಾಹಿತ್ಯ ಪ್ರಕಾರಗಳನ್ನು ಪರಿಚಯಿಸಬೇಕು  ಕೃಷ್ಣೋಜಿ ಮಾಸ್ಟರ್
  ಬದಿಯಡ್ಕ: ಜುಲೈ 17 ಎ ಯು ಪಿ ಶಾಲೆ ಪಳ್ಳತ್ತಡ್ಕ ದಲ್ಲಿ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಉದ್ಘಾಟನಾ ಸಮಾರಂಭವು  ನಡೆಯಿತು. ಜಿ.ವಿ.ಎಚ್.ಎಸ್.ಎಸ್ ಕಾರಡ್ಕ ಶಾಲೆಯ  ನಿವೃತ್ತ ಅಧ್ಯಾಪಕರಾದ ಶ್ರೀ ಕೃಷ್ಣೋಜಿ ರಾವ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭಾಷೆಯ ವಿವಿಧ ಸಾಹಿತ್ಯ ಪ್ರಕಾರಗಳನ್ನು ಪರಿಚಯಿಸಿದರು. ವಿದ್ಯಾ ರಂಗದ ಮೂಲಕ ಕವಿತೆ , ಕಥೆ, ಭಾಷಣ ,ಒಗಟು ಪದಬಂಧ ,ಟಿಪ್ಪಣಿ ಕಂಠಪಾಠ, ಮೊದಲಾದವುಗಳು ನಡೆಯಬೇಕು. ಸಭಾಕಂಪನ ದೂರವಾಗಿ, ಧೈರ್ಯ ತುಂಬಲು ವಿದ್ಯಾರಂಗ ಸಹಕಾರಿ. ಅದೇ ರೀತಿ ಭಾವನೆಗಳ ಪ್ರಕಟಣೆಗೆ ಇದು  ಒಂದು ಉತ್ತಮ ವೇದಿಕೆಯಾಗಿದೆ. ಜೀವನದಲ್ಲಿ ಮಾತುಗಾರಿಕೆಗೆ ಬಹಳ ಮಹತ್ವವಿದೆ .ಪ್ರಿಯವಾಗಿ ಮಾತನಾಡುವ ಮೂಲಕ ಜನರ ಮೆಚ್ಚುಗೆಯನ್ನು ಗಳಿಸಬೇಕು. ಅದೇ ರೀತಿ ನೇತೃತ್ವ ಗುಣವನ್ನು ಹೊಂದಿದ್ದರೆ ಸರಿಯಾದ ರೀತಿಯಲ್ಲಿ ಯಾವುದೇ ಕಾರ್ಯಕ್ರಮವನ್ನು ಸಂಯೋಜನೆ ಮಾಡಬಹುದು.
 ಸರಿಯಾದ ಮಾರ್ಗದರ್ಶನದ ಮೂಲಕ ನಿಗದಿತ ಸಮಯ ಹಾಗೂ ಚೌಕಟ್ಟಿನೊಳಗೆ ಕಾರ್ಯಕ್ರಮವನ್ನು ನಡೆಸಿದರೆ ಮಾತ್ರವೇ ಫಲಕಾರಿಯಾಗಬಹುದು. ಯಾವುದೇ ಕಾರ್ಯಕ್ರಮ ನಡೆದರೂ ಅದರ ವರದಿಯನ್ನು ಬರೆದಿಡುವುದು ಉತ್ತಮ ಇದರಿಂದಾಗಿ ಬರವಣಿಗೆಯ ಕೌಶಲ್ಯವು ಹೆಚ್ಚುತ್ತದೆ. ಇದೆಲ್ಲವೂ ವಿದ್ಯಾರಂಗ ಕಾರ್ಯಕ್ರಮದ ಮೂಲಕ ನಡೆಸಲು ಸಾಧ್ಯ.  ಈಗಿನ ಕೊರೋನಾ ಕಾಲಘಟ್ಟದಲ್ಲಿ ಮನೆಯಲ್ಲಿದ್ದುಕೊಂಡು ಪುಸ್ತಕವನ್ನು ಒಳ್ಳೆಯ ಗೆಳೆಯನಾಗಿ ಆರಿಸಿಕೊಂಡು ಅದನ್ನು ಓದಿ, ಬರೆಯುವುದರಿಂದ ಸಾಹಿತ್ಯವನ್ನು ವಿಕಾಸ ಮಾಡಬಹುದು. ಇದಕ್ಕೆ ಹೆತ್ತವರ ಹಾಗೂ ಅಧ್ಯಾಪಕರ ಪೂರ್ಣ ಬೆಂಬಲ ಅಗತ್ಯ. ಅದೇ ರೀತಿ ಕವಿತಾ ರಚನೆಯ ವಿಧಾನವನ್ನು ಸರಳವಾಗಿ ಮಕ್ಕಳಿಗೆ ಅರ್ಥವಾಗುವಂತೆ ತಿಳಿಸಿಕೊಟ್ಟರು. ಆಸಕ್ತಿ ಇರುವ  ವಿಷಯವನ್ನು ಆರಿಸಿಕೊಂಡು ಅದಕ್ಕೆ ಸಂಬಂಧಪಟ್ಟ ವಿಷಯಗಳನ್ನು ಸಂಗ್ರಹಿಸಿ  ಪ್ರಾಸ ಪದಗಳನ್ನು ಉಪಯೋಗಿಸಿಕೊಂಡು ಕವಿತೆಯನ್ನು  ರಚಿಸಬಹುದು ಎಂಬುದನ್ನು ಉದಾಹರಣೆ ಸಮೇತ ತಿಳಿಸಿಕೊಟ್ಟರು. 
ಅದೇ ರೀತಿ ಅವರು ಬರೆದಂತಹ ಸರಳವಾದ ಕವಿತೆಗಳನ್ನು ಆಲಾಪಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಧಿರಾ ಆರ್ ಅವರು ಭಾಗವಹಿಸಿದರು. ಕೋರೋನದಿಂದಾಗಿ ಮಕ್ಕಳು ಅನುಭವಿಸುವ ಕಷ್ಟಗಳನ್ನು ಅವರಿಗೆ ನಷ್ಟವಾಗುವ ಶಾಲಾ ಸಮಯ, ಸಂತೋಷದ ಕುರಿತು  ಅನುಭವವನ್ನು ಹಂಚಿದರು. ಈ ಆನ್ಲೈನ್ ಕಾಲಘಟ್ಟದಲ್ಲಿ ರಚನೆಗಳನ್ನು ರಚಿಸಲು ಸಮಯವನ್ನು ಸದುಪಯೋಗ ಪಡಿಸಬೇಕೆಂದು ಹೇಳಿದರು. ಮನುಷ್ಯತ್ವದ ಮೌಲ್ಯಗಳನ್ನು ಕಲಿಸಿಕೊಡುವ ವೇದಿಕೆಯಾಗಿದೆ ಇದು. ಅದೇ ರೀತಿ ಮಕ್ಕಳ ಸೃಜನಾತ್ಮಕತೆಯನ್ನು ವಿಕಾಸಗೊಳಿಸಲು ಹಾಗೂ ಮಕ್ಕಳಲ್ಲಿ ನೇತೃತ್ವ ಗುಣ ಬೆಳೆಸಲು ಬೆಳೆಸಲಿರುವ ವೇದಿಕೆಯಾಗಿದೆ ವಿದ್ಯಾರಂಗ  ತಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಸಾಮರ್ಥ್ಯದ ವಿಕಾಸಕ್ಕಾಗಿ ವಿದ್ಯಾ ರಂಗವನ್ನು ಬಳಸಬೇಕೆಂದು ಅಭಿಪ್ರಾಯಪಟ್ಟರು.  ಬರವಣಿಗೆಯ ಅನುಭವ, ಪಠ್ಯೇತರ ಚಟುವಟಿಕೆಗಳನ್ನು ಈ ವಿದ್ಯಾ ರಂಗದಲ್ಲಿ ಪ್ರಕಟಪಡಿಸಲು ಅವಕಾಶವನ್ನು ಕಲ್ಪಿಸಿಕೊಡುತ್ತದೆ ಇದರಿಂದ ಮನಸ್ಸಿಗೆ ತುಂಬಾ ಸಂತೋಷ  ಲಭಿಸುತ್ತದೆ. ಕಾಸರಗೋಡಿನಲ್ಲಿ ವ್ಯತ್ಯಸ್ತ ಭಾಷೆಗಳ ಮೂಲಕ ಇದನ್ನು ಪ್ರಕಟಪಡಿಸಲೂ ಬಹುದು ಎಂಬುದನ್ನು ನೆನಪಿಸಿದರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ಮಣಿ ವಹಿಸಿದರು ಶಾಲಾ ಅಧ್ಯಾಪಕರಾದ ಗಿರೀಶ್ ಸ್ವಾಗತಿಸಿ ವಿದ್ಯಾ ಟೀಚರ್ ಧನ್ಯವಾದವಿತ್ತರು.

Comments