ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಆಕ್ಸಿಜನ್ ಪ್ಲಾಂಟ್ ಗಳ ನಿರ್ಮಾಣ ನೂತನ ಹೆಜ್ಜೆಗಾರಿಕೆ: ಸಚಿವ ಎಂ.ವಿ.ಗೋವಿಂದನ್ ಮಾಸ್ಟರ್

ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಆಕ್ಸಿಜನ್ ಪ್ಲಾಂಟ್ ಗಳ ನಿರ್ಮಾಣ ನೂತನ ಹೆಜ್ಜೆಗಾರಿಕೆ: ಸಚಿವ ಎಂ.ವಿ.ಗೋವಿಂದನ್ ಮಾಸ್ಟರ್ 
ಕಾಸರಗೋಡು, ಜೂ.7: ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಆಕ್ಸಿಜನ್ ಪ್ಲಾಂಟ್ ಗಳ ನಿರ್ಮಾಣ ನೂತನ ಹೆಜ್ಜೆಗಾರಿಕೆ ಎಂದು ಸ್ಥಳೀಯಾಡಳಿತ, ಅಬಕಾರಿ ಸಚಿವ ಎಂ.ವಿ.ಗೋವಿಂದನ್ ಮಾಸ್ಟರ್ ಅಭಿಪ್ರಾಯಪಟ್ಟರು.  
                              ಚಟ್ಟಂಚಾಲ್ ಉದ್ದಿಮೆ ಉದ್ಯಾನದಲ್ಲಿ ನಿರ್ಮಿಸಲಾಗುವ ಆಕ್ಸಿಜನ್ ಘಟಕದ ನಿರ್ಮಾಣಕ್ಕೆ ಆನ್ ಲೈನ್ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. 
                                ಕೋವಿಡ್ ಮೂರನೇ ಅಲೆಯ ಭವಿಷ್ಯವನ್ನು ಆರೋಗ್ಯ ಇಲಾಖೆ ತಿಳಿಸುತ್ತಿರುವ ಈ ಅವಧಿಯಲ್ಲಿ ಪ್ರಾಣವಾಯುವಿನ ಅನಿವಾರ್ಯತೆ ಅರಿತುಕೊಂಡು ಕಾಸರಗೋಡು ಜಿಲ್ಲಾಪಂಚಾಯತ್ ನೇತೃತ್ವದಲ್ಲಿ ಎಲ್ಲ ಸ್ಥಳೀಯಾಡಳಿತ 
ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಾರ್ವಜನಿಕ ವಲಯದಲ್ಲಿ ಆಕ್ಸಿಜನ್ ಘಟಕ ಸ್ಥಾಪಿಸುವ ಕ್ರಮ ಇತರರಿಗೆ ಮಾದರಿಯಾದುದು ಎಂದವರು ವಿಶ್ಲೇಷಿಸಿದರು. 
                                  ರಾಜ್ಯದಲ್ಲಿ 38.5 ಕೋಟಿ ರೂ. ವೆಚ್ಚದಲ್ಲಿ ಒಟ್ಟು 35 ಆಕ್ಸಿಜನ್ ಘಟಕಗಳ ನಿರ್ಮಾಣ ನಡೆಸಲು ಕೇರಳ ಸರಕಾರ ನಿರ್ಧರಿಸಿದೆ. ದೂರದೃಷ್ಟಿಯೊಂದಿಗೆ ಮುಂಬರಬಹುದಾದ ಅಪಾಯಗಳನ್ನು ಮನಗಂಡು ಜಾಗರೂಕತೆ ಕೈಗೊಳ್ಳುವ ಸರಕಾರದ ನೀತಿಯ ದ್ಯೋತಕವಾಗಿ ಈ ಘಟಕಗಳ ಸ್ಥಾಪನೆ ನಡೆಯುತ್ತಿವೆ. ಸರಕಾರ ಜನತೆಯೊಂದಿಗೆ ಮುನ್ನಡೆ ಸಾದಿಸುತ್ತಿದೆ ಎಂದವರು ತಿಳಿಸಿದರು. 
                              ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಷಾನವಾಝ್ ಪಾದೂರು ಶಿಲಾಫಲಕ ಅನಾವರಣಗೊಳಿಸಿದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಯೋಜನೆಯ ವರದಿ ವಾಚಿಸಿದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರು ಜಿಲ್ಲಾ ಪಂಚಾಯತ್ ನ ಟೆಲಿ ಮೆಡಿಸಿನ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳಿಗಿರುವ ಆಕ್ಸೀಮೀಟರ್ ವಿತರಣೆಯನ್ನು ಶಾಸಕ ನ್ಯಾಯವಾದಿ ಸಿ.ಎಚ್.ಕುಂಞಂಬು ನೆರವೇರಿಸಿದರು.  
                                   ಶಾಸಕರಾದ ಎ.ಕೆ.ಎಂ.ಅಶ್ರಫ್, ಎನ್.ಎ.ನೆಲ್ಲಿಕುನ್ನು, ಇ.ಚಂದ್ರಶೇಖರನ್, ಎಂ.ರಾಜಗೋಪಾಲನ್ ಮುಖ್ಯ ಅತಿಥಿಯಾಗಿದ್ದರು. ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಷಾನವಾಝ್ ಪಾದೂರು ಸ್ವಾಗತಿಸಿದರು. ಕಾರ್ಯದರ್ಶಿ ಪಿ.ನಂದಕುಮಾರ್ ವಂದಿಸಿದರು. 

Comments