- Get link
- X
- Other Apps
- Get link
- X
- Other Apps
ಗಡಿನಾಡ ಕನ್ನಡ ಸೇವೆ : ದ.ಕ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ರವಿ ನಾಯ್ಕಾಪು ಅವರಿಗೆ ಸನ್ಮಾನ
ಕಾಸರಗೋಡು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಈ ತಿಂಗಳ 12 ರಿಂದ 14 ರ ವರೆಗೆ ಮಂಗಳೂರಿನಲ್ಲಿ ಜರಗಲಿರುವ 24 ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಡಿನಾಡ ಕನ್ನಡ ಸೇವೆಗಾಗಿ ಕಾಸರಗೋಡಿನ ಪತ್ರಕರ್ತ, ಲೇಖಕ, ಸಾಹಿತ್ಯ, ಜಾನಪದ ಸಂಘಟಕ ರವಿ ನಾಯ್ಕಾಪು ಅವರಿಗೆ ವಿಶೇಷ ಸನ್ಮಾನ. ತ್ರಿದಿನ ಸಾಹಿತ್ಯ ಸಮ್ಮೇಳನದ ಸಮಾರೋಪ ದಿನವಾದ 14 ರಂದು ಭಾನುವಾರ ಸಾಯಂಕಾಲ 4 ಗಂಟೆಗೆ ಜರಗುವ ಸಮಾರೋಪ ಸಮಾರಂಭದಲ್ಲಿ ವಿಶೇಷ ಸನ್ಮಾನ ಕಾರ್ಯಕ್ರಮ ಜರಗಲಿದೆ. ಬಹುಶ್ರುತ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ ಅವರು ಸಮೇಳನಾಧ್ಯಕ್ಷರಾಗಿದ್ದು, ಆಡಳಿತ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರಗಳ ವರಿಷ್ಠರು ಉಪಸ್ಥಿತರಿರುವರು.
ಕಳೆದ ಎರಡು ದಶಕಗಳಿಂದ ಪೂರ್ಣಕಾಲಿಕ ಪತ್ರಕರ್ತನಾಗಿರುವ ರವಿ ನಾಯ್ಕಾಪು ಅವರು ಅನೇಕ ಪತ್ರಿಕಾ, ದೃಶ್ಯ ಮಾಧ್ಯಮಗಳಲ್ಲಿ ವರದಿಗಾರ, ಉಪಸಂಪಾದಕ, ಸಹ ಸಂಪಾದಕ, ಸುದ್ದಿ ಸಂಪಾದಕನಾಗಿ ಸೇವೆ ಸಲ್ಲಿಸಿದ್ದಾರೆ. ದೂರದರ್ಶನ ಚ್ಯಾನೆಲ್ ಗಳ ವಾರ್ತಾ ವಾಚಕನಾಗಿದ್ದಾರೆ. ಪ್ರಮುಖ ವ್ಯಕ್ತಿಗಳ ಜತೆಗೆ ಚ್ಯಾನೆಲ್ ಸಂದರ್ಶನ ನಡೆಸಿದ್ದಾರೆ. ಸಾಮಾಜಿಕ ಸ್ಪಂದನದ, ಮಾನವೀಯ ಕಳಕಳಿಯ ನೂರಾರು ಬರಹಗಳು, ಅಧ್ಯಯನಾತ್ಮಕ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಾಸರಗೋಡಿನ ಸಾಂಸ್ಕೃತಿಕ, ಸಾಹಿತ್ಯ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಇವರು ಕನ್ನಡ ಸಂಘಟಕರೂ, ಕನ್ನಡ ಕಾರ್ಯಕ್ರಮಗಳ ನಿರೂಪಕರೂ, ಉದ್ಘೋಷಕರೂ ಆಗಿದ್ದಾರೆ.
ದಾನಗಂಗೆ, ಸ್ನೇಹಗಂಗೆ, ಗಾನಗಂಗೆ ಎಂಬ ಮೂರು ಕೃತಿಗಳನ್ನು ರಚಿಸಿದ್ದಾರೆ. ಇವರ ಸ್ನೇಹಗಂಗೆ ಕೃತಿಗೆ ಮುಂಬಯಿ ಅಂಧೇರಿ ಕರ್ನಾಟಕ ಸಂಘವು "ಕನ್ನಡ ಸಾಹಿತ್ಯ ಸಾಧಕ ಪ್ರಶಸ್ತಿ - 2019" ನೀಡಿ ಗೌರವಿಸಿದೆ. ವಿವಿಧೆಡೆ ಪ್ರಶಸ್ತಿ, ಪುರಸ್ಕಾರ, ಸನ್ಮಾನಕ್ಕೆ ಭಾಜನರಾಗಿದ್ದಾರೆ.
ಕರ್ನಾಟಕ ಜಾನಪದ ಪರಿಷತ್ತಿನ ಕೇರಳ ಗಡಿನಾಡ ಘಟಕದ ಕೋಶಾಧಿಕಾರಿ, ಬದಿಯಡ್ಕ ತುಳುವೆರೆ ಆಯನೋ ಕೂಟದ ಕೋಶಾಧಿಕಾರಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸಹಿತ ಅನೇಕ ಸಂಘಟನೆಗಳಲ್ಲಿ ಸಕ್ರಿಯರು. ಉತ್ತಮ ಬರಹಗಾರ, ಮಾತುಗಾರ, ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಲ್ಪಟ್ಟಿದ್ದಾರೆ.
ಸಾಹಿತ್ಯ ಸಮ್ಮೇಳನದ ವಿಶೇಷ ಸನ್ಮಾನಕ್ಕೆ ಕರ್ನಾಟಕ ಜಾನಪದ ಪರಿಷತ್ತಿನ ಕೇರಳ ಗಡಿನಾಡ ಘಟಕವು ಅಭಿನಂದನೆ ಸಲ್ಲಿಸಿದೆ.
- Get link
- X
- Other Apps
Comments
Post a Comment