ರಾಷ್ಟ್ರೀಯ ಭಾವೈಕ್ಯ ಮತ್ತು ಸಂವಿಧಾನದ ಸತ್ವಗಳ ದೃಡತೆಯ ಮೂಲಕ ದೇಶದ ಸ್ವಾತಂತ್ರ್ಯ ಉಳಿದು ಬರಬೇಕು : ಕಂದಾಯ ಸಚಿವ


ರಾಷ್ಟ್ರೀಯ ಭಾವೈಕ್ಯ ಮತ್ತು ಸಂವಿಧಾನದ ಸತ್ವಗಳ ದೃಡತೆಯ ಮೂಲಕ ದೇಶದ ಸ್ವಾತಂತ್ರ್ಯ ಉಳಿದು ಬರಬೇಕು : ಕಂದಾಯ ಸಚಿವ  
ಕಾಸರಗೋಡು, ಆ.15: ರಾಷ್ಟ್ರೀಯ ಭಾವೈಕ್ಯ ಮತ್ತು ಸಂವಿಧಾನದ ಸತ್ವಗಳ ದೃಡತೆಯ ಮೂಲಕ ದೇಶದ ಸ್ವಾತಂತ್ರ್ಯ ಉಳಿದು ಬರಬೇಕು ಎಂದು ಕಂದಾಯ ಸಚಿವ ಇ.ಚಂದರಶೇಖರನ್ ಅಭಿಪ್ರಾಯಪಟ್ಟರು.
                          ವಿದ್ಯಾನಗರದ ನಗರಸಭೆ ಕ್ರೀಡಾಂಗಣದಲ್ಲಿ ಶನಿವಾರ ಸ್ವಾತಂತ್ರೋತ್ಸವ ಅಂಗವಾಗಿ ಧ್ವಜಾರೋಹಣ ನಡೆಸಿ ಅವರು ಮಾತನಾಡಿದರು.     
                              ನಮ್ಮ ದೇಶದ ಸಂವಿಧಾನ ಜಗತ್ತಿಗೇ ಮಾದರಿಯಾಗಿದೆ. ಸಂವಿಧಾನದ ಸತ್ವಗಳು ಕಳೆದುಹೋದರೆ ದೇಶದ ಪ್ರಜಾಪ್ರಭುತ್ವ ನೀತಿಗೆ ಅಸ್ತಿತ್ವವಿಲ್ಲದೇ ಆದೀತು ಎಂದು ಅವರು ತಿಳಿಸಿದರು.
                              ದೇಶದಲ್ಲಿ 22 ಅಧಿಕೃತ ಭಾಷೆಗಳಿದ್ದರೆ, 1652 ಮಾತೃಭಾಷೆಗಳಿವೆ. ವಿಶ್ವದ ಎಲ್ಲ ಧರ್ಮಗಳೂ ಭಾರತದಲ್ಲಿ ಸ್ಥಾನ ಪಡೆದಿವೆ. 3 ಸಾವಿರಕ್ಕೂ ಅಧಿಕ ಜಾತಿಗಳು, 2500 ಕ್ಕೂ ಅಧಿಕ ಉಪಜಾತಿಗಳು ಇಲ್ಲಿವೆ. ವಿವಿಧತೆಯಲ್ಲಿ ಏಕತೆ ನಮ್ಮ ಮೂಲ ಮಂತ್ರವಾಗಿರುವುದರಿಂದಲೇ ಭಾರತ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿ ರಚನೆಗೊಂಡಿದೆ ಎಂದು ಕಂದಾಯ ಸಚಿವ ಅಭಿಪ್ರಾಯಪಟ್ಟರು. 
                           ದ್ವಿತೀಯ ಜಾಗತಿಕ ಮಹಾಯುದ್ಧದ ನಂತರ ಜಗತ್ತು ಎದುರಿಸುತ್ತಿರುವ ಅತ್ಯಂತ ದೊಡ್ಡ ದುರಂತ ಕೋವಿಡ್ 19 ಆಗಿದೆ. ವಿಶ್ವಾದ್ಯಂತ 2 ಕೋಟಿಗೂ ಅಧಿಕ ಮಂದಿಯನ್ನು ರೋಗಿಯಾಗಿಸಿದ ಈ ಮಹಾಮಾರಿ, ಏಳೂವರೆ ಲಕ್ಷಕ್ಕೂ ಅಧಿಕ ಮಂದಿಯನ್ನು ಬಲಿಪಡೆದಿದೆ. ದೇಶವಿಡೀ ಈ ಪಿಡುಗಿನ ನಿವಾರಣೆಗೆ ಒಗ್ಗಟ್ಟಿನ ಹೋರಾಟದಲ್ಲಿದೆ. ಜೊತೆಗೆ ರಾಜ್ಯದಲ್ಲಿ ನಡೆದ ಪ್ರಾಕೃತಿಕ ದುರಂತಗಳು ಜನತೆಯನ್ನು ತಲ್ಲಣಗೊಳಿಸಿವೆ. ಮೂನ್ನಾರ್ ಪೆಟ್ಟಿಮೂಡಿ ದುರಂತ, ಕರಿಪುರ ವಿಮಾನ ದುರಂತ ಇತ್ಯಾದಿಗಳಲ್ಲಿ ಅನೇಕ ಮಂದಿ ಬಲಿಯಾಗಿದ್ದಾರೆ. ಇದೇ ವೇಳೆ ಮಾನವೀಯ ಅನುಕಂಪ ಜೊತೆಗಿನ ರಕ್ಷಣಾ ಚಟುವಟಿಕೆಗಳು ಇತ್ಯಾದಿ ದುರಂತಗಳ ಆಘಾತವನ್ನು ಕಡಿಮೆಗೊಳಿಸಿವೆ ಎಂಬುದೂ ಗಮನಾರ್ಹ ಎಂದರು. 
                           ಅಮಾನವೀಯವಾಗಿ ಸಮಾಜವನ್ನು ಒಡೆಯುವ ಷಡ್ಯಂತ್ರಗಳಿಗೆ ವಿರುದ್ಧವಾಗಿ ಜನಮಾನಸದ ಒಗ್ಗಟ್ಟು ಪ್ರಬಲಗೊಳ್ಳಬೇಕು. ಸ್ನೇಹ, ಸೌಹಾರ್ದಯುತ ಬದುಕಿನೊಂದಿಗೆ ಸ್ವಾತಂತ್ರ್ಯವನ್ನು ನಾವು ಅರ್ಥ ಪೂರ್ಣಗೊಳಿಸಬೇಕು ಎಂದವರು ನುಡಿದರು.                .....................................................................................................................

Comments