ಕೋವಿಡ್ ಸೋಂಕು ಬಾಧೆಗೆ ಕಾಸರಗೋಡಿನಲ್ಲಿ ಮೊದಲ ಬಲಿ

ಕೋವಿಡ್ ಸೋಂಕು ಬಾಧೆಗೆ ಮೊದಲ ಬಲಿ 

ಕೋವಿಡ್ ಸೋಂಕು ಬಾಧೆಯಿಂದ ಕಾಸರಗೋಡು ಜಿಲ್ಲೆಯಲ್ಲಿ ಮೊದಲ ಸಾವು ವರದಿಯಾಗಿದೆ. ಉಪ್ಪಳ ಹಿದಾಯತ್ ನಗರ ನಿವಾಸಿ ನಫೀಝಾ (75) ಕಣ್ಣೂರು ಮೆಡಿಕಲ್ ಕಾಲೇಜಿನಲ್ಲಿ ಕೊನೆಯುಸಿರೆಳೆದವರು ಎಂದು ಜಿಲ್ಲಾವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.  
                         ಜೂ.19ರಂದು ಕೊಲ್ಲಿರಾಷ್ಟ್ರ ದಿಂದ ಇವರ ಪುತ್ರ ಆಗಮಿಸಿದ್ದು, 16 ದಿನಗಳ ಸಾಂಸ್ಥಿಕ ನಿಗಾದಲ್ಲಿದ್ದು, ನಂತರ ಮನೆಗೆ ತೆರಳಿದ್ದರು. ಜೊತೆಗೆ ಮೀಂಜ ಪಂಚಾಯತ್ ನಿವಾಸಿಯೊಬ್ಬರು ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದ್ದವರು ಜು.7ರಂದು ನಫೀಝಾ ಅವರ ಮನೆಗೆ ಭೇಟಿ ನೀಡಿದ್ದರು. ಅದೇ ದಿಣ ನಫೀಝಾ ಮತ್ತು ಅವರ ಸೊಸೆಗೆ ಜ್ವರ, ಶೀತ ಲಕ್ಷಣಗಳು ಕಂಡುಬಂದಿದ್ದು, ಮರುದಿನ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಬಂದು ಗಂಟಲರಸ ತಪಾಸಣೆ ನಡೆಸಿ ಮನೆಗೆ ಮರಳಿದ್ದರು. ಜು.10ರಂದು ಸೊಸೆಗೆ ರೋಗ ಲಕ್ಷಣ ಅಧಿಕಗೊಂಡ ಹಿನ್ನೆಲೆಯಲ್ಲಿ ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ನಿಗಾದಲ್ಲಿ ದಾಖಲಾಗಿದ್ದರು. ಇವರ ಪರಿಚರಣೆಗೆ ನಫೀಝಾ ಅವರೇ ಆಸ್ಪತ್ರೆಯಲ್ಲಿದ್ದರು. 
                           ಜು.11ರಂದು ಸೊಸೆಗೆ ಕೋವಿಡ್ 19 ಖಚಿತಗೊಂಡಿತ್ತು. ಅಂದೇ ಇಬ್ಬರನ್ನೂ ಕಾಞಂಗಾಡಿನಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರ ಸ್ವರೂಪದ ಉಸಿರಾಟದ ತೊಂದರೆ ಮತ್ತು ಸಿಹಿಮೂತ್ರ ರೋಗಿಯೂ ಆಗಿದ್ದ ನಫೀಝಾ ಅವರಿಗೆ ರೋಗ ಉಲ್ಭಣಗೊಂಡ ಹಿನ್ನೆಲೆಯಲ್ಲಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದಿನಿಂದ ಕೃತಕ ಉಸಿರಾಟ ಯಂತ್ರದ ಸಹಾಯದಲ್ಲೇ ಚಿಕಿತ್ಸೆಯಲ್ಲಿದ್ದರು. 
                          ಜು.17ರಂದು ಸಂಜೆ 6.30ರ ವೇಳೆಗೆ ಅವರ ಆರೋಗ್ಯ ಬಿಗಡಾಯಿಸತೊಡಗಿ, ಅವರು ಸ್ಮೃತಿ ಕಳೆದುಕೊಂಡಿದ್ದರು. ಅದೇ ದಿನ ರಾತ್ರಿ 9.30ಕ್ಕೆ ಹೃದಯಾಘಾತಕ್ಕೊಳಗಾದ ಅವರು ರಾತ್ರಿ 10.45ಕ್ಕೆ ಕೊನೆಯುಸಿರೆಳೆದಿದ್ದರು. ಇವರ ಕುಟುಂಬದ 8 ಮಂದಿಗೂ, ನೆರೆಮನೆಯ ಒಬ್ಬರಿಗೂ ಕೋವಿಡ್ ಪಾಸಿಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. 

Comments