ಕರ್ನಾಟಕ ಮೆಡಿಕಲ್ -ಇಂಜಿನಿಯರಿಂಗ್ ಪ್ರವೇಶಾತಿ ಪರೀಕ್ಷೆ: ಕಾಞಂಗಾಡಿನಿಂದ ತಲಪ್ಪಾಡಿಗೆ 11 ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯ , ಕ್ವಾರೆಂಟೈನ್ ಕಡ್ಡಾಯ

 ಕರ್ನಾಟಕ ಮೆಡಿಕಲ್ -ಇಂಜಿನಿಯರಿಂಗ್ ಪ್ರವೇಶಾತಿ ಪರೀಕ್ಷೆ: ಕಾಞಂಗಾಡಿನಿಂದ ತಲಪ್ಪಾಡಿಗೆ 11 ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯ , ಕ್ವಾರೆಂಟೈನ್ ಕಡ್ಡಾಯ
ಕಾಸರಗೋಡು, ಜು. 28: ಕರ್ನಾಟಕ ಮೆಡಿಕಲ್ - ಇಂಜಿನಿಯರಿಂಗ್ ಪ್ರವೇಶಾತಿ (ಸಿ.ಇ.ಟಿ.)ಪರೀಕ್ಷೆ ಗೆ ಹಾಜರಾಗುವ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಜು.30,31, ಆ.1ರಂದು ಕಾಞಂಗಾಡಿನಿಂದ ತಲಪ್ಪಾಡಿಗೆ 11 ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
 ಬೆಳಗ್ಗೆ 5.30ರಿಂದ ಪ್ರತಿ ನಿಮಿಷಕ್ಕೊಂದು ಬಸ್ ನಂತೆ 11 ಬಸ್ ಗಳು ಈ ನಿಟ್ಟಿನಲ್ಲಿ ಸಂಚಾರ ನಡೆಸಲಿವೆ. ಇವುಗಳಲ್ಲಿ 6 ಬಸ್ ಗಳು ಕಾಞಂಗಾಡ್-ಮಾವುಂಗಾಲ್-ಚೆರ್ಕಳ ರೂಟ್ ನಲ್ಲಿ, 5 ಬಸ್ ಗಳು ಕಾಞಂಗಾಡ್-ಚಂದ್ರಗಿರಿ ರೂಟ್ ನಲ್ಲಿ ಸಂಚಾರ ನಡೆಸುವುವು. ಎಲ್ಲಿಂದ ಬೇಕಿದ್ದರೂ ವಿದ್ಯಾರ್ಥಿಗಳು ಬಸ್ ಏರಬಹುದಾಗಿದೆ. ವಿದ್ಯಾರ್ಥಿಗಳು ಎಲ್ಲಿಂದ ಕೈತೋರಿದರೂ ನಿಲುಗಡೆ ಮಾಡುವಂತೆ ಬಸ್ ಚಾಲಕರಿಗೆ ಆದೇಶ ನೀಡಲಾಗಿದೆ. ಆದರೆ ಒಮ್ಮ ಬಸ್ ಏರಿದ ವಿದ್ಯಾರ್ಥಿಗೆ ಇಳಿಕೆಗೆ ಅನುಮತಿ ತಲಪ್ಪಾಡಿಯಲ್ಲಿ ಮಾತ್ರ ಇರುವುದು ಎಂದು ಜಿಲ್ಲಾಧಿಕಾರಿ ಹೇಳಿದರು. 
 ಪರೀಕ್ಷೆ ಮುಗಿಸಿ ಮರಳುವ ವೇಳೆ ತಲಪ್ಪಾಡಿಯಲ್ಲಿ ಸಂಜೆ 5 ಗಂಟೆಯಿಂದ ಕಾಞಂಗಾಡ್ ವರೆಗೂ ಕೆ.ಎಸ್.ಆರ್.ಟಿ.ಸಿ. ಬಸ್ ಗಳು ಸಂಚಾರ ನಡೆಸಲಿವೆ. ಅಗತ್ಯವಿದ್ದಲ್ಲಿ ವಿದ್ಯಾರ್ಥಿಗಳ ಹೆತ್ತವರಿಗೂ ಬಸ್ ನಲ್ಲಿ ಜತೆಗೆ ಪ್ರಯಾಣ ನಡೆಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. 
 ತಲಪ್ಪಾಡಿಯಿಂದ ನಂತರ ಕರ್ನಾಟಕ ಸರಕಾರ ವತಿಯಿಂದ ಬೆಳಗ್ಗೆ 7.30ರಿಂದ ವಾಹನ ಸೌಲಭ್ಯ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. 
 ಯಾವುದೇ ಸಂದೇಹಗಳಿದ್ದಲ್ಲಿ ಸಂಪರ್ಕಿಸಬಹುದು: ಕಾಸರಗೋಡು ಜಿಲ್ಲಾ ನಿಯಂತ್ರಣ ಕೊಠಡಿ: 04994-255001. ಬೆಂಗಳೂರು: 080-23462758. 
ಕ್ವಾರೆಂಟೈನ್ ಕಡ್ಡಾಯ 
ಕರ್ನಾಟಕ ಸಿ.ಇ.ಟಿ. ಪರೀಕ್ಷೆ ಗೆ ಹಾಜರಾಗಿ ಮರಳುವ ವಿದ್ಯಾರ್ಥಿಗಳು ಕಡ್ಡಾಯವಾಗಿ 14 ದಿನಗಳ ರೂಂ ಕ್ವಾರೆಂಟೈನ್ ಪಾಲಿಸಬೇಕು. ಕರ್ನಾಟಕ ಸರಕಾರದ ಅನುಮತಿ ಲಭಿಸಿ ಹೆತ್ತವರೂ ಪರೀಕ್ಷೆ ಕೇಂದ್ರ ವರೆಗೆ ತೆರಳಿದ್ದರೆ ಅವರೂ ಈ ಆದೇಶ ಪಾಲಿಸಬೇಕು. ಖಾಸಗಿ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಯ್ಯುವುದಿದ್ದರೂ ಅಭ್ಯಂತರವಿಲ್ಲ. ಆದರೆ ಪರೀಕ್ಷೆ ಮುಗಿಸಿ ಮರಳುವ ವೇಳೆ ಕೋವಿಡ್ 19 ಜಾಗ್ರತಾ ಪೋರ್ಟಲ್ ನಲ್ಲಿ ನೋಂದಣಿ ನಡೆಸಬೇಕಾದುದು ಕಡ್ಡಾಯ. ಇವರೂ 14 ದಿನಗಳ ರೂಂ ಕ್ವಾರೆಂಟೈನ್ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿದರು.  

Comments