ಕಾಸರಗೋಡು ಜಿಲ್ಲಾ ಬಿಜೆಪಿಯ ಬೇಡಿಕೆಗೆ ಫಲ: ಗಡಿ ರಸ್ತೆಗಳಲ್ಲಿನ ಮಣ್ಣು ತೆಗೆಯಲು ಕರ್ನಾಟಕ ಸಚಿವರ ಆದೇಶ

ಕಾಸರಗೋಡು ಜಿಲ್ಲಾ ಬಿಜೆಪಿಯ ಬೇಡಿಕೆಗೆ ಫಲ: ಗಡಿ ರಸ್ತೆಗಳಲ್ಲಿನ ಮಣ್ಣು ತೆಗೆಯಲು ಕರ್ನಾಟಕ ಸಚಿವರ ಆದೇಶ
ಕಾಸರಗೋಡು: ಕೇರಳ ಕರ್ನಾಟಕ ಗಡಿ ಗ್ರಾಮಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳನ್ನು ಲಾಕ್‌ಡೌನ್ ಹಿನ್ನೆಲೆಯಲ್ಲಿ  ಮಣ್ಣು ಹಾಕಿದ್ದು, ಅದನ್ನು ತೆರವುಗೊಳಿಸಲು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ವಹಿಸಿರುವ ಕರ್ನಾಟಕ ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆದೇಶಿಸಿದ್ದಾರೆ.
ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಬಿಜೆಪಿ ನೇತಾರರ ಬೇಡಿಕೆಯ ಹಿನ್ನೆಲೆಯಲ್ಲಿ  ಈ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕ ಗಡಿ ಹೊಂದಿರುವ ಕಾಸರಗೋಡು ಜಿಲ್ಲೆಯ ಮುಖ್ಯರಸ್ತೆಗಳಲ್ಲಿ ಮಣ್ಣನ್ನು ಕೂಡಲೇ ತೆರವುಗೊಳಿಸಲು ಆದೇಶ ಹೊರಡಿಸಿದ್ದಾರೆ.  ಇದರಲ್ಲಿ ದೇಲಂಪಾಡಿಯ ಬೆಳ್ಳಿಪ್ಪಾಡಿ, ಪನತ್ತಡಿಯ ಕಲ್ಲಾಪಳ್ಳಿ, ಎಣ್ಮಕಜೆ ಪಂಚಾಯಿತಿಯ ಗಡಿ ಹೊಂದಿರುವ ಸಾರಡಕ ಸಹಿತ ಕಾಸರಗೋಡು ಜಿಲ್ಲೆಯ ಪ್ರಧಾನ ರಸ್ತೆಗಳಲ್ಲಿನ ಮಣ್ಣು ತೆರವುಗೊಳಿಸಿ ಅಂತರರಾಜ್ಯ ಸಂಚಾರಕ್ಕೆ ಅನುಮತಿ ನೀಡಲು ಆದೇಶ ನೀಡಿದ್ದಾರೆ.
ಗಡಿ ರಸ್ತೆಗಳನ್ನು ತೆರವುಗೊಳಿಸಿ ಗಡಿ ಗ್ರಾಮಗಳಲ್ಲಿನ ಜನರಿಗೆ ಸಂಚಾರಕ್ಕೆ ಅನುಮತಿ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ  ನ್ಯಾಯವಾದಿ ಕೆ.ಶ್ರೀಕಾಂತ್ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ನೇತಾರರೊಂದಿಗೆ ಕಳೆದ ದಿನ ಗಡಿ ಪ್ರದೇಶವಾದ ಎಣ್ಮಕಜೆಯ ಸಾರಡ್ಕ, ದೇಲಂಪಾಡಿಯ ಬೆಳ್ಳಿಪ್ಪಾಡಿ, ಮುಡೂರು ಮುಂತಾದಡೆಗೆ ಭೇಟಿ ನೀಡಿದ್ದರು. ದಕ ಶಾಸಕರು ಹಾಗೂ ಅಕಾರಿಗಳ ಜೊತೆ ಚರ್ಚೆ ನಡೆಸಲಾಗಿತ್ತು. ಈ ಹಿಂದೆ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಗಡಿ ರಸ್ತೆಗಳಲ್ಲಿ ಸಂಚಾರಕ್ಕೆ ಅನುಮತಿ ನೀಡಬೇಕೆಂದು  ಒತ್ತಾಯಿಸಿ ಬಿಜೆಪಿ   ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ನೇತೃತ್ವದಲ್ಲಿ ತಲಪಾಡಿಯಲ್ಲಿ  ಪ್ರತಿಭಟನೆ ನಡೆಸಲಾಗಿತ್ತು. ಎರಡೂ ಜಿಲ್ಲೆಗಳ ಪ್ರಧಾನ ರಸ್ತೆಗಳ ಮೂಲಕ ಸಂಚಾರ ನಡೆಸಲು ಅನುಮತಿಯೊಂದಿಗೆ ಜಿಲ್ಲೆಯ ಜನರು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರವಾಗಲಿದೆ ಎಂಬುದಾಗಿ ಕೆ.ಶ್ರೀಕಾಂತ್ ತಿಳಿಸಿದ್ದಾರೆ.

Comments