ವಸುಂಧರೆಗೆ ರವಿಯ ಸುತ್ತ ಸುತ್ತುವ ಕಾಯಕವಾದರೆ, ಆದಿತ್ಯನಿಗೆ ಭೂಮಂಡಲವನ್ನು ಬೆಳಗುವ ಕಾಯಕ : ಪರಿಣಿತ ರವಿ


ವಸುಂಧರೆಗೆ ರವಿಯ ಸುತ್ತ ಸುತ್ತುವ ಕಾಯಕವಾದರೆ, ಆದಿತ್ಯನಿಗೆ ಭೂಮಂಡಲವನ್ನು ಬೆಳಗುವ ಕಾಯಕ : ಪರಿಣಿತ ರವಿ


ಬದುಕೆಂಬುದು ನಿಂತ ನೀರಲ್ಲ. ನಿರಂತರ ಚಲನಶೀಲವಾದ ಪ್ರವಾಹ. ಜೀವನಪ್ರವಾಹ ಸುಗಮವಾಗಿ ಸಾಗಲು ಕಾಯಕವು ಅತ್ಯಂತ ಮುಖ್ಯವಾಗುತ್ತದೆ. ಮಾನವ ತನ್ನ ಜೀವನ ನಿರ್ವಹಣೆಗಾಗಿ ಅವಲಂಬಿಸಿರುವ ವೃತ್ತಿಯೇ ಕಾಯಕ ಎನಿಸುತ್ತದೆ. ಕಾಯಕದಿಂದ ಬದುಕಿಗೊಂದು ಸುಂದರವಾದ ಅರ್ಥ ಲಭಿಸುತ್ತದೆ. ಇಂತಹ ಕಾಯಕಗಳಲ್ಲಿ ಮೇಲುಕೀಳೆಂಬ ಬೇಧಭಾವ ಸಲ್ಲದು. ಸತ್ಯನಿಷ್ಠೆಯಿಂದ ಧರ್ಮ ಮಾರ್ಗದಲ್ಲಿ ನಡೆದು ತನ್ನ ಕಾಯಕವನ್ನು ಮಾಡಿ ಬದುಕನ್ನು ಬಾಳುವುದು ಮಾನವ ಜೀವನವನ್ನು ಅರ್ಥಪೂರ್ಣವಾಗಿಸುತ್ತದೆ.

ಪ್ರತೀಯೊಬ್ಬ ಮಾನವನೂ ಕಾಯಕಶೀಲನಾಗಿರಬೇಕು. ಇದರಿಂದ ತನ್ನ ಕುಟುಂಬಕ್ಕೆ, ಸಮಾಜಕ್ಕೆ, ದೇಶಕ್ಕೆ ಕೀರ್ತಿ ತರುವಂತಿರಬೇಕು. ಹಾಗೆ ನೋಡಿದರೆ ಇಡೀ ಬ್ರಹ್ಮಾಂಡವೇ ಕಾಯಕತತ್ವದ ಮೇಲೆ ಸುಸೂತ್ರವಾಗಿ ಸಾಗುತ್ತಿದೆ ಎಂದರೆ ತಪ್ಪಾಗಲಾರದು. ವಸುಂಧರೆಗೆ ರವಿಯ ಸುತ್ತ ಸುತ್ತುವ ಕಾಯಕವಾದರೆ, ಆದಿತ್ಯನಿಗೆ ಭೂಮಂಡಲವನ್ನು ಬೆಳಗುವ ಕಾಯಕ. ಚಂದಿರನಿಗೆ ಉಷೆಯಲ್ಲಿ ಬೆಳದಿಂಗಳ ಸುರಿಸುವ ಕಾಯಕವಾದರೆ, ನದಿ-ತೊರೆಗಳಿಗೆ ಶರಧಿಯನ್ನು ಸೇರಲು ಸಾಗುವ ಕಾಯಕ. ಜಲಧಿಯ ನೀರಿಗೆ ಮೋಡವಾಗಿ, ಮೋಡಕ್ಕೆ ಮಳೆಯಾಗಿ ಸುರಿದು ಸಕಲ ಚರಾಚರಗಳಿಗೆ ಜೀವಸೆಲೆಯಾದ ನೀರುಣಿಸುವ ಕಾಯಕ. ಹೀಗೆ ಪವನ,ಅಗ್ನಿ, ಖಗಮಿಗ,ಮರಗಿಡ ಎಲ್ಲಾ ಜೀವಜಾಲಗಳೂ ಅವರವರ ಕಾಯಕದಲ್ಲಿ ನಿರತವಾಗಿವೆ. ಇನ್ನು ಸಕಲ ಸೃಷ್ಟಿಯಲ್ಲಿ ಶ್ರೇಷ್ಠನೆನಿಸಿದ ಮಾನವ ಕಾಯಕವನ್ನು ಮರೆಯಲಾದೀತೆ?

ಸಂತರು,ಋಷಿಮುನಿಗಳು, ವಚನಕಾರರು ಶತಶತಮಾನಗಳ ಹಿಂದಿನಿಂದಲೂ ಕಾಯಕದ ಮಹತ್ವವನ್ನು ಸಾರುತ್ತಾ ಬಂದಿದ್ದಾರೆ.  ಅವರಲ್ಲಿ ಮುಂಚೂಣಿಯಲ್ಲಿ ನಿಲ್ಲುವ ವಚನಕಾರರು ಬಸವಣ್ಣ ಹಾಗೂ ಸರ್ವಜ್ಞ. 'ಕಾಯಕವೇ ಕೈಲಾಸ' ಎಂದು ಪ್ರತಿಪಾದಿಸಿದ ಮಹಾನುಭಾವರು ಬಸವಣ್ಣನವರು. ತಮ್ಮ ಹತ್ತಾರು ವಚನಗಳಲ್ಲಿ ಕಾಯಕಮಹತ್ವದ ಮೂಲಮಂತ್ರವನ್ನು ಸಾರಿದವರಲ್ಲಿ ಸರ್ವಜ್ಞರು ಅಗ್ರಗಣ್ಯರು.

 ಉದ್ಯೋಗವುಳ್ಳವನ| ಹೊದ್ದುವದು ಸಿರಿ ಬಂದು ಉದ್ಯೋಗವಿಲ್ಲದಿರುವವನು ಕರದೊಳಗೆ| ಇದ್ದರೂ ಪೋಕು ಸರ್ವಜ್ಞ|
ಕಾಯಕ ಮಾಡದವನ ಬಳಿ ಐಶ್ವರ್ಯವು ತಾನಾಗಿಯೇ ಬಂದು ಆಶ್ರಯಿಸುತ್ತದೆ. ನಿರುದ್ಯೋಗಿಯಾದವನ ಕೈಯಲ್ಲಿದ್ದ ಹಣ ಕೂಡಾ ಹೋಗಿ ಬಿಡುತ್ತದೆ ಎಂದು ವಚನದಲ್ಲಿ ಕಾಯಕದ ಪ್ರಾಮುಖ್ಯತೆಯನ್ನು ಸೊಗಸಾಗಿ ಹೇಳಲಾಗಿದೆ. ಇದೇ ರೀತಿಯ ಇನ್ನೊಂದು ವಚನದಲ್ಲಿಕೂಡಾ ಉದ್ಯೋಗವಿಲ್ಲದವನ ಪರಿಸ್ಥಿತಿಯನ್ನು ಬಹಳ ಚೆನ್ನಾಗಿ ಮನಮುಟ್ಟುವಂತೆ ವರ್ಣಿಸಲಾಗಿದೆ.
 ಉದ್ಯೋಗವಿಲ್ಲದವನು| ಬಿದ್ದಲ್ಲಿ ಬಿದ್ದಿರನು| ಹದ್ದುನೆವನವನು ಈಡಾಡಿ ಹಾವ ಕೊಂ| ಡೆದ್ದು ಹೋದಂತೆ ಸರ್ವಜ್ಞ|

ಆಡುವ ಮಾತು ಮಾಡುವ ಕಾಯಕದಲ್ಲಿ ಇತರರಿಗೆ ಹಾಗೂ ಸಮಾಜಕ್ಕೆ ಒಳಿತನ್ನು ಮಾಡಿದರೆ ಯಾವ ಭಕ್ತಿಯ ಅಗತ್ಯವಿಲ್ಲವೆಂದು ಸರ್ವಜ್ಞ ವಚನದಲ್ಲಿ ಮಾರ್ಮಿಕವಾಗಿ ಹೇಳಿದ್ದಾರೆ.  ನಿತ್ಯ ನೇಮಗಳೇಕೆ| ಮತ್ತೆ ಪೂಜೆಗಳೇಕೆ| ನೆತ್ತಿ ಬೋಳೇಕೆ ಜಡೆಯೇಕೆ| ಅರಿದು ನೆರೆ ಸತ್ಯ ಉಳ್ಳವಗೆ ಸರ್ವಜ್ಞ|

ಕೆಲಸದಲ್ಲಿ ಆಲಸ್ಯ ಸಲ್ಲದು ಎಂದು ಬಹಳ ಮನೋಹರವಾಗಿ ಹೇಳಿದ್ದಾರೆ. ಆಲಸಿಕೆಯಲಿರುವಂಗೆ ಕ್ಲಸಂಬಲಿಯಿಲ್ಲ| ಕೆಲಸಕ್ಕೆ ಆಲಸದಿರುವಂಗೆ ಬೇರಿಂದ| ಹಲಸು ಕಾತಂತೆ ಸರ್ವಜ್ಞ|. ಯಾವುದೇ ಕಾಯಕದಲ್ಲಾಗಲಿ ಆಲಸ್ಯವನ್ನು ತೊರೆದರೆ ಹಲಸನ್ನು ಬೇರು ಕಾಯುವಂತೆ ಕೆಲಸವೇ ನಮ್ಮನ್ನು ಕಾಯುತ್ತದೆ ಎಂಬುದನ್ನು ಸುಂದರವಾಗಿ ಸಾರಲಾಗಿದೆ.

ಕೃಷಿಯ ಮಹತ್ವನ್ನು ಸರ್ವಜ್ಞ ತನ್ನ ವಚನಗಳಲ್ಲಿ ಅಂದೇ ಸಾರಿದ್ದರು.
ಕೋಟಿವಿದ್ಯೆಗಳಲ್ಲಿ ಮೇಟಿ ವಿದ್ಯೆಯೆ ಮೇಲು| ಮೇಟಿಯಿಂ ರಾಟೆ ನಡೆದುದಲ್ಲದೆ ದೇಶ| ದಾಡವೆ ಕೆಡುಗು ಸರ್ವಜ್ಞ|. ಜೀವಿಗಳ ಹಸಿವನ್ನು ತಣಿಸುವುದಕ್ಕಾಗಿ ದವಸಧಾನ್ಯಗಳನ್ನು ಬೆಳೆಯುವ ಬೆಸಾಯದ ವಿದ್ಯೆಯೇ ಎಲ್ಲಾ ಕಾಯಕಗಳಿಗಿಂತ ಮೇಲು ಎಂದು ಇಲ್ಲಿ ಹೇಳಿದ್ದಾರೆ.

ಇನ್ನು ನಾವು ಮಾಡುವ ಕೆಲಸ ಹೇಗಿರಬೇಕೆಂದು ಸುಂದರವಾದ ವಚನದ ಮೂಲಕ ತಿಳಿ ಹೇಳಿದ್ದಾರೆ ಸರ್ವಜ್ಞ. ಆಡದೆ ಮಾಡುವವ ರೂಢಿಯೊಳಗುತ್ತಮನು| ಆಡಿ ಮಾಡುವನು ಮಧ್ಯಮನು| ಅಧಮ ತಾನಾಡಿಯೂ ಮಾಡ ಸರ್ವಜ್ಞ|. ಮಾಡುವ ಕಾಯಕವನ್ನು ಮೊದಲೇ ಡಂಗುರ ಸಾರದೆ ಮಾಡುವವನುಉತ್ತಮನು. ಹೇಳಿಕೊಂಡು ಮಾಡುವವನು ಮಧ್ಯಮ ಹಾಗೂ ಕೊಚ್ಚಿಕೊಂಡರೂ ಮಾಡದೇ ಇರುವವನು ಅಧಮ ಎಂದು ಕೆನ್ನೆಗೆ ಬಾರಿಸಿದಂತೆ  ತಿಳಿಸಲಾಗಿದೆ.

ಇನ್ನು ತಾವು ಮಾಡಬೇಕಾದ ಕಾಯಕವನ್ನು ಮಾಡದೆಬೇರೆಯವರನ್ನುನಿಂದಿಸುವವರ ಬಗ್ಗೆಯೂ ಸರ್ವಜ್ಞ ಅಂದವಾದ ವಚನದಲ್ಲಿ ಬುದ್ಧಿಮಾತು ಹೇಳಿದ್ದಾರೆ. ಹದಬದೆಯಲಾರಂಭ ಕದನದಲಿಕೂರಂಬ| ನದಿಯ ಹಾಯುವಲಿ ಹರುಗೋಲು ಮರೆವಾತ| ವಿಧಿಯ ಬೈದೇನು ಸರ್ವಜ್ಞ|.  ಅವರವರ ಕೆಲಸವನ್ನು ಸರಿಯಾಗಿ ಮಾಡದೆ ವಿಧಿಯನ್ನು ಹಳಿಯುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂದು ಎಲ್ಲದಕ್ಕು ವಿಧಿಯನ್ನು ಜರೆಯುವವರಿಗೆ ಸರಿಯಾಗಿ ಚಾಟಿ ಬೀಸಲಾಗಿದೆ.

ಯಾವುದೇ ಕಾಯಕವಾಗಲಿ ಒಲವಿನಿಂದ ಮಾಡಿದವನು ಮಾತ್ರ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳುತ್ತಾನೆ ಎಂದು ವಚನದಲ್ಲಿ ಸಾರುತ್ತಾರೆ. ಆಳಾಗಬಲ್ಲವನು ಆಳುವನು ಅರಸಾಗಿ| ಆಳಾಗಿ ಬಾಳಲರಿಯದವನು ಕಡೆಯಲ್ಲಿ| ಹಾಳಾಗಿ ಹೋಹ ಸರ್ವಜ್ಞ| ಕಾಯಕದ ಮೂಲಕ ಬದುಕನ್ನು ಉತ್ತಮವಾಗಿ ನಿರ್ಮಿಸಿಕೊಳ್ಳಬೇಕೆಂಬ ಹಂಬಲ ಇಲ್ಲದವನು ಕೊನೆಯಲ್ಲಿ ನಾಶವಾಗಿ ಹೋಗುತ್ತಾನೆ ಅನ್ನುವ ಕಿವಿಮಾತು ಇಲ್ಲಿದೆ.  ಯಾವುದೇ ಮಾತನ್ನು ಆಡುವ ಮೊದಲು, ಯಾವುದೇ ಕೆಲಸವನ್ನು ಮಾಡುವ ಮೊದಲು ಸರಿಯಾಗಿ ಯೋಚಿಸಬೇಕೆಂದು ಸುಂದರವಾಗಿ ವಚನ ಬೋಧಿಸುತ್ತದೆ. ಆರೈದು ನಡೆವವನು ಆರೈದು ದುಡಿವವನು| ಆರೈದು ಅಡಿಯನಿಡುವವನು| ಲೋಕಕ್ಕೆ ಆರಾಧ್ಯನಕ್ಕು ಸರ್ವಜ್ಞ|. ಚೆನ್ನಾಗಿ ಯೋಚಿಸಿ ಕಾರ್ಯಪ್ರವೃತನಾದರೆ ಮಾತ್ರ ಮನ್ನಣೆಯು ದಕ್ಕುತ್ತದೆ ಎಂಬುದು ವಚನದ ತಾತ್ಪರ್ಯ.

ಸರ್ವಜ್ಞ ಸುಮಾರು ಹದಿನಾರು-ಹದಿನೇಳನೇ ಶತಮಾನದ ಧೀಮಂತ ವಚನಕಾರ. ತನ್ನ ತ್ರಿಪದಿಗಳಲ್ಲಿ ಮಾಹಾನ್ ಜ್ಞಾನಭಂಡಾರವನ್ನೇ ತೆರೆದಿಡುವ ಮಹಾಪುರುಷ. ಸಮಾಜದ ಅಂಕುಡೊಂಕುಗಳನ್ನು ಬಯಲಿಗೆಳೆದು, ಜನರನ್ನು ಚಿಂತನೆಯಒರೆಗೆ ಹಚ್ಚಿ ವಿಚಾರವಂತರನ್ನಾಗಿ ಮಾಡಿದ ಮಹಾನ್ ಚೇತನ. ಇವರದ್ದು ಮುಕ್ತ ಮನಸಿನ ಉದಾತ್ತವಾದ ಬರವಣಿಗೆ. ಕಂಡದ್ದನ್ನು ಕಂಡ ಹಾಗೆ, ಇದ್ದುದ್ದನ್ನು ಇದ್ದ ಹಾಗೆ ಹೇಳುವ ಗಟ್ಟಿಗುಂಡಿಗೆಯ ನಿಷ್ಠುರವಾದಿ. ಸರ್ವಜ್ಞನ ವಚನಗಳು ಸರಳ ಸುಂದರವಾಗಿದ್ದು ಅನುಭವವೇದ್ಯವಾಗಿರುತ್ತದೆ. ಕಾಯಕದ ಕುರಿತು ಮಾತ್ರವಲ್ಲ ಹತ್ತು ಹಲವು ವಿಚಾರಗಳ ಬಗ್ಗೆ ಸಮಾಜವನ್ನು ತಿದ್ದಿ ತೀಡಿ ಸರಿ ದಾರಿಯಲ್ಲಿ ನಡೆಯುವಂತೆ ಪ್ರೆರೇಪಿಸುತ್ತದೆ. ಸಾಮಾನ್ಯ ಜನರಿಗೂ ಅರ್ಥೈಸಿಕೊಳ್ಳುವಂತಿರುವ ವಚನಗಳು ಕನ್ನಡಿಗರ ಅಭಿಮಾನವನ್ನು ಇಮ್ಮಡಿಗೊಳಿಸಿ, ಕನ್ನಡ ವಚನ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದೆ.

ಪರಿಣಿತ ರವಿ

Comments