ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ‘ಸಾಹಿತ್ಯ ಸಂಸ್ಕೃತಿ ಸಿರಿ’ ಕಾರ್ಯಕ್ರಮ
ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಗೌರವ ಸನ್ಮಾನ; ಯಕ್ಷಗಾನ ಬಯಲಾಟ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು
ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ ಅಕ್ಟೋಬರ್ 29, 2026ರಂದು ‘ಸಾಹಿತ್ಯ ಸಂಸ್ಕೃತಿ ಸಿರಿ’ ಎಂಬ ವಿಶೇಷ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿಶ್ವವಿದ್ಯಾಲಯದ ಪಯಸ್ವಿನಿ ಸಭಾಂಗಣದಲ್ಲಿ ಸಂಜೆ 3.30ರಿಂದ ಕಾರ್ಯಕ್ರಮ ನಡೆಯಲಿದ್ದು, ಸಾಹಿತ್ಯ, ಕರಾವಳಿಯ ಕಲಾ ಪರಂಪರೆ ಹಾಗೂ ಸಾಂಸ್ಕೃತಿಕ ವೈವಿಧ್ಯವನ್ನು ಪರಿಚಯಿಸುವ ಉದ್ದೇಶವನ್ನು ಹೊಂದಿದೆ.
ಕಾರ್ಯಕ್ರಮವನ್ನು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಸಿದ್ದು ಪಿ. ಅಲಗೂರು ಅವರು ಉದ್ಘಾಟಿಸಲಿದ್ದಾರೆ. ಕೇರಳ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ ಅವರು ‘ಕರಾವಳಿ ಕಲಾ ಸಂಪತ್ತು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಶಿಕ್ಷಣದ ಮೂಲಕ ಸಾಮಾಜಿಕ ಪರಿವರ್ತನೆಗೆ ಮಹತ್ವದ ಕೊಡುಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀ ಹರೇಕಳ ಹಾಜಬ್ಬ ಅವರನ್ನು ಗೌರವಿಸಿ ಸನ್ಮಾನಿಸಲಾಗುವುದು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಜಯಪ್ರಕಾಶ್ ಆರ್., ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶಕರಾದ ಪ್ರೊ. ರಾಜೇಂದ್ರ ಪಿಲಾಂಕಟ್ಟ, ಅಕಾಡೆಮಿಕ್ ವಿಭಾಗದ ಡೀನರಾದ ಪ್ರೊ. ಜೋಸೆಫ್ ಕೊಯಿಪಲ್ಲೈ ಹಾಗೂ ಭಾಷೆ ಮತ್ತು ತುಲನಾತ್ಮಕ ಅಧ್ಯಯನ ವಿಭಾಗದ ಡೀನರಾದ ಪ್ರೊ. ತಾರು ಎಸ್. ಪವಾರ್ ಅವರು ಗೌರವ ಉಪಸ್ಥಿತರಿರಲಿದ್ದಾರೆ. ಸಂಜೆ 4.30ರಿಂದ 5 ಗಂಟೆಯವರೆಗೆ ಕನ್ನಡ ವಿಭಾಗದ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 5ರಿಂದ 5.30ರವರೆಗೆ ಪ್ರಶಸ್ತಿ ವಿಜೇತ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಸಾಂಸ್ಕೃತಿಕ ತಂಡವು ಸಾಂಪ್ರದಾಯಿಕ ಕಲಾ ಪ್ರದರ್ಶನವನ್ನು ನೀಡಲಿದೆ. ಈ ತಂಡದ ನಿರ್ದೇಶನವನ್ನು ವಾಣಿಜ್ಯ ಮತ್ತು ಅಂತರರಾಷ್ಟ್ರೀಯ ವ್ಯವಹಾರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಶ್ರವಣ ಕೆ. ಅವರು ವಹಿಸಲಿದ್ದಾರೆ.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಸಂಜೆ 5.30ರಿಂದ 6.30ರವರೆಗೆ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಖ್ಯಾತ ಕಲಾವಿದರ ಸಹಭಾಗಿತ್ವದಲ್ಲಿ ‘ಮಹಿಷಮರ್ದಿನಿ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಈ ಮೂಲಕ ಕರಾವಳಿ ಕರ್ನಾಟಕದ ಶ್ರೀಮಂತ ಯಕ್ಷಗಾನ ಪರಂಪರೆ ಹಾಗೂ ಸಾಂಪ್ರದಾಯಿಕ ಕಲಾ ವೈಭವವನ್ನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಪ್ರೇಕ್ಷಕರಿಗೆ ಪರಿಚಯಿಸಲಾಗುವುದು. ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಯ ವಿವಿಧ ಆಯಾಮಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಈ ಕಾರ್ಯಕ್ರಮವು ಕನ್ನಡ ಭಾಷೆ ಹಾಗೂ ಕರಾವಳಿಯ ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ಸಾರುವ ವೇದಿಕೆಯಾಗಲಿದೆ. ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ವತಿಯಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.





Comments
Post a Comment